ಬೆಂಗಳೂರು : ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಿಲಿಕಾನ್ ಸಿಟಿ ಮಂದಿ ತತ್ತರಿಸಿ ಹೋಗಿದ್ದಾರೆ. ಮಳೆಗೆ ಕೆಲವು ಕಡೆ ನೀರು ಮನೆಗೆ ನುಗ್ಗಿದ್ದು, ದವಸ_ಧಾನ್ಯಗಳೆಲ್ಲಾ ನೀರು ಪಾಲಾಗಿದೆ. ಮಳೆ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ಘೋಷಣೆ ಬಗ್ಗೆ ಇಂದು ಸಭೆ ನಡೆದಿದೆ.
ಸಭೆ ಬಳಿಕ, ಸಿಎಂ ಬಿಎಸ್ ಯಡಿಯೂರಪ್ಪ ಮಳೆಯಿಂದ ಹಾನಿಗೊಳಗಾದ ಪ್ರತೀ ಕುಟುಂಬಕ್ಕೆ ತಲಾ 25 ಸಾವಿರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಸಭೆಯಲ್ಲಿ ಕಂದಾಯ ಸಚಿವ ಆರ್ ಅಶೋಕ್, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಭಾಗಿಯಾಗಿದ್ದರು. ಮಳೆಯಿಂದ ಹಾನಿಗೊಳಗಾದವರಿಗೆ ಸ್ಥಳದಲ್ಲೇ 25 ಸಾವಿರ ರೂ.ಚೆಕ್ ವಿತರಣೆ ಮಾಡಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಿಬಿಎಂಪಿ ಆಯುಕ್ತರಾದ ಮಂಜುನಾಥ ಪ್ರಸಾದ್ ಅವರಿಗೆ ಕರೆ ಮಾಡಿ ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ಮಾಡಿ ಪರಿಸ್ಥಿತಿ ಅವಲೋಕಿಸುವಂತೆ ಸೂಚನೆ ನೀಡಿದ್ದಾರೆ. ಇಂದು ಮತ್ತು ನಾಳೆ ಸಹ ಬಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಕಟ್ಟೆಚ್ಚರವಾಗಿ ಇರುವಂತೆ ಸಿಎಂ ಬಿಎಸ್ವೈ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.