ಬೆಂಗಳೂರು: ಯುವರಾಜ್ ಪೋಸ್ಟಿಂಗ್ ಮಾತ್ರವಲ್ಲ ಜಾಗ ಕೊಡಿಸಿವುದಾಗಿಯೂ ವಂಚನೆ ಮಾಡಿದ್ದಾನೆ. ಮೈಸೂರು ಮೂಲದ ಡಾ.ಗುರುರಾಜ್ ರವಿ ಎಂಬುವವರಿಗೆ ಮೋಸ ಮಾಡಿದ್ದು, 6.5 ಕೋಟಿ ರೂಪಾಯಿ ಕ್ಯಾಷ್ ಹಾಗೂ 85 ಕೋಟಿಯ ಚೆಕ್ ಪಡೆದು ವಂಚನೆ ಮಾಡಿದ್ದಾನೆ. ಯುವರಾಜ್ ನಿಂದ ಮೋಸ ಹೋಗಿದ್ದ, ಡಾ.ಗುರುರಾಜ್ ರವಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೇವನಹಳ್ಳಿ ಬಳಿ ಜಮೀನು ಕೊಡಿಸುವುದಾಗಿ ಹಣ ಪೀಕಿದ್ದ ವಂಚಕ ಸ್ವಾಮಿ. ವಿವಾದಿತ ಭೂಮಿ ಇದ್ದು ವಿವಾದ ಬಗೆಹರಿಸಿ ಕೊಡಿಸುವುದಾಗಿ ನಂಬಿಸಿದ್ದ. ಗುರುರಾಜ್ ಸೇವಾಲಾಲ್ ಸ್ವಾಮಿಯ ಮಾತಿಗೆ ಮರುಳಾಗಿ ಕೋಟಿ ಕೋಟಿ ತಂದು ಕೊಟ್ಟಿದ್ದ. ಮಾಲೀಕರಿದ್ದಾರೆ ಎಂದು ತೋರಿಸಲು ಖಾಲಿ ಚೆಕ್ ಕೊಡಿ ಎಂದು ಕೇಳಿದ್ದ. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಗುರುರಾಜ್ 85 ಕೋಟಿ ರೂಪಾಯಿ ಬ್ಲಾಂಕ್ ಚೆಕ್ಗಳನ್ನ ನೀಡಿದ್ದ. ಆನಂತರ ಯುವರಾಜ್ 6.5 ಕೋಟಿ ಕ್ಯಾಶ್ ಹಾಗೂ 85 ಕೋಟಿ ಚೆಕ್ ಪಡೆದು ಕೈಗೆ ಸಿಗದೆ ಪರಾರಿಯಾಗಿದ್ದ. ಈ ಮಧ್ಯೆ ಹಣ ವಾಪಸ್ ನೀಡದೇ ಡಾ.ಗುರುರಾಜ್ ಗೆ ಜೀವ ಬೆದರಿಕೆ ಹಾಕಿದ್ದ ಎಂಬ ಆರೋಪ ಕೇಳಿ ಬಂದಿದೆ.
ಪೋಸ್ಟಿಂಗ್ ಕೊಡಿಸುವುದಾಗಿ ರಾಜಕಾರಣಿಗಳ ಹೆಸರೇಳಿಕೊಂಡು ಕೋಟಿ ಕೋಟಿ ಪೀಕಿದ್ದ ಯುವರಾಜ್, ಪೊಲೀಸರ ಅತಿಥಿಯಾಗಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಗುರುರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಸಿಸಿಬಿ ಅಧಿಕಾರಿಗಳು ಈ ಸಂಬಂಧ ತನಿಖೆ ತೀವ್ರಗೊಳಿಸಿದ್ದಾರೆ.