ಬೆಂಗಳೂರು: ಯುನೈಟೆಡ್ ಕಿಂಗ್ಡಮ್ ನಲ್ಲಿ ಕಂಡುಬಂದಿರುವ ಹೊಸ ಪ್ರಭೇದದ ಕೊರೋನಾ ವೈರಸ್ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸುತ್ತಿದೆ. ಇದೇ ಸಮಯದಲ್ಲಿ ರಾಜ್ಯದಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದ್ದು ಜ.1ರಿಂದ ಆರಂಭವಾಗಲಿರುವ ಶಾಲಾ-ಕಾಲೇಜುಗಳ ಭವಿಷ್ಯದ ಮೇಲೆ ಮತ್ತೆ ಪರಿಣಾಮ ಬೀರಲಿದೆಯೇ ಎಂದು ಕಾದು ನೋಡಬೇಕಾದ ಪರಿಸ್ಥಿತಿ ಎದುರಾಗಿದೆ.
ಹೊಸ ಪ್ರಭೇದದ ವೈರಸ್ ಅತಿ ವೇಗವಾಗಿ ಹರಡುತ್ತಿರುವ ಕಾರಣದಿಂದ ಶಾಲೆ ಆರಂಭದ ಬಗ್ಗೆ ಮತ್ತೆ ಪರಾಮರ್ಶೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಕೊರೋನಾ ಹೊಸ ಪ್ರಭೇದದ ರಾಜ್ಯದಲ್ಲಿ ಪತ್ತೆಯಾಗಿಲ್ಲ. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆಯನ್ನು ನೀಡಿದ್ದಾರೆ.
ಸದ್ಯ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಜನವರಿ 1 ರಿಂದ ವಿದ್ಯಾಗಮ ಆರಂಭವಾಗಲಿದ್ದು, ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲೂ 6 ರಿಂದ 9 ನೇ ತರಗತಿಗಳಿಗೆ ವಿದ್ಯಾಗಮ ಜಾರಿ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಆದರೆ ಇದೀಗ ಮ್ಯೂಟಂಟ್ ವೈರಸ್ ಭಯ ಹರಡಿದ್ದು ಶಾಲೆಗಳು ಪುನಾರಂಭ ಮಾಡಬೇಕೆ ಬೇಡವೇ ಎಂಬುದನ್ನು ಮತ್ತೆ ನಿರ್ಧರಿಸಬೇಕಾದ ಸಂಕಟಕ್ಕೆ ರಾಜ್ಯ ಸರ್ಕಾರ ಸಿಲುಕಿದೆ.
ಇದರ ನಡುವೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮತ್ತು ಅಲ್ಲಿನ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆನ್ ಲೈನ್ ತರಗತಿ ಬಂದ್ ಮಾಡಿದ್ದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ ಇಂದಿನಿಂದ ತರಗತಿಗಳನ್ನು ಶುರು ಮಾಡುವುದಾಗಿ ಹೇಳಿದೆ.