ನವದೆಹಲಿ : ಆಡಳಿತ ಪಕ್ಷ ಬಿಜೆಪಿ ಪರವಾಗಿ ಫೇಸ್ ಬುಕ್ ಇಂಡಿಯಾ ದ್ವೇಷ ಭಾಷಣವನ್ನು ದೇಶದಲ್ಲಿ ಹರಡುತ್ತಿದೆ ಎಂಬ ಆರೋಪ ಫೇಸ್ ಬುಕ್ ಇಂಡಿಯಾದ ವಿರುದ್ಧ ಕೇಳಿ ಬಂದಿತ್ತು. ಈ ಹಿನ್ನೆಲೆ ಫೇಸ್ ಬುಕ್ ಇಂಡಿಯಾ ಕಾರ್ಯನಿರ್ವಾಹಕಿ ಅಂಖಿ ದಾಸ್ ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಕಳೆದ 9 ವರ್ಷಗಳಿಂದ ಅಂಖಿ ದಾಸ್ ಅವರು ಫೇಸ್ಬುಕ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಫೇಸ್ಬುಕ್ನ ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ದ್ವೇಷ ಭಾಷಣ, ಪೋಸ್ಟ್ಗೆ ಸಂಬಂಧಪಟ್ಟಂತೆ ಇರುವ ಫೇಸ್ಬುಕ್ ನೀತಿ ಅನುಷ್ಠಾನದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಬಿಜೆಪಿಗೆ ಅನುಕೂಲವಾಗುವಂತೆ ತಾರತಮ್ಯ ಮಾಡಿದ್ದಾರೆ ಎಂಬ ಆರೋಪ ಇವರ ವಿರುದ್ಧ ಕೇಳಿ ಬಂದಿತ್ತು. ಇದರ ವಿಚಾರಣೆಯ ಸಲುವಾಗಿ ಅಂಖಿ ದಾಸ್ ಹಾಗೂ ಫೇಸ್ಬುಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಸಂಸದೀಯ ಸಮಿತಿ ಎದುರು ಹಾಜರಾಗಿದ್ದರು.
ಇನ್ನು ಅಂಖಿದಾಸ್ ಫೇಸ್ ಬುಕ್ ನಲ್ಲಿ ತಮ್ಮ ಕೆಲಸದ ಬಗ್ಗೆ ಹೇಳಿಕೊಂಡಿದ್ದು, ಕಂಪನಿಯಲ್ಲಿ ನಾನು ಸ್ಮಾರ್ಟ್ ಜನರಿಂದ ಬಹಳ ಕಲಿತಿದ್ದೇನೆ. ಅದರಲ್ಲೂ ಪಾಲಿಸಿ ಟೀಂ ನಲ್ಲಿದ್ದವರಿಂದ ಸಾಕಷ್ಟು ತಿಳಿದುಕೊಂಡಿದ್ದೇನೆ. ಇದು ವಿಶೇಷ ಕಂಪನಿ ಮತ್ತು ವಿಶೇಷ ಜನರ ಗುಂಪು. ಥ್ಯಾಂಕ್ಯೂ ಮಾರ್ಕ್ ಜಗತ್ತಿಗಾಗಿ ಸುಂದರವಾದದ್ದನ್ನು ಸೃಷ್ಟಿಸುತ್ತಿರುವುದಕ್ಕೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಅಜಿತ್ ಮೋಹನ್, ಅಂತಿಮವಾಗಿ ಅಂಖಿ ದಾಸ್ ತಮ್ಮ ಸ್ಥಾನ ತೊರೆದಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅಂಖಿ ರಾಜೀನಾಮೆ ಸಲ್ಲಿಸಿದ್ದಾರೆ. ಅಂಖಿ ದಾಸ್ ಅವರು ನಮ್ಮ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಇದ್ದವರು. ಭಾರತದಲ್ಲಿ ಫೇಸ್ಬುಕ್ ಶುರುವಾದ ಆರಂಭದ ಕಾಲದಿಂದಲೂ ಇದ್ದರು. ಕಂಪನಿಯ ಏಳ್ಗೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.