ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಮಧ್ಯಪ್ರದೇಶ ಸಚಿವೆ ಇಮರ್ತಿ ದೇವಿ ಅವರನ್ನು ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ʼಐಟಂʼ ಎಂದು ಕರೆದಿರುವುದಕ್ಕೆ ಸೋನಿಯಾ ಗಾಂಧಿಯವರನ್ನು ಪ್ರಶ್ನಿಸಿದ್ದಾರೆ.
ನೀವು ಒಬ್ಬ ತಾಯಿ, ನಿಮಗೂ ಒಬ್ಬಳು ಮಗಳಿದ್ದಾಳೆ. ನಿಮ್ಮ ಮಗಳಿಗೆ ಯಾರಾದರೂ ‘ಐಟಂ’ ಎಂದು ಹೇಳಿದ್ದರೆ ನೀವು ಸುಮ್ಮನಿರುತ್ತಿದ್ರಾ ಎಂದು ಇಮರ್ತಿದೇವಿಯವರು ಸೋನಿಯಾ ಗಾಂಧಿಯವರನ್ನು ಪ್ರಶ್ನಿಸಿದ್ದಾರೆ.
ನಾನು ಒಬ್ಬಳು ಬಡ ಕುಟುಂಬದಿಂದ ಬಂದ ಹೆಣ್ಣುಮಗಳು. ನನ್ನ ಮೇಲೆ ಈ ರೀತಿ ಕೆಟ್ಟ ಶಬ್ದಗಳಿಂದ ಟೀಕೆ ಮಾಡುವುದು ಎಷ್ಟು ಸರಿ. ಇಂಥವರನ್ನು ನಿಮ್ಮ ಪಕ್ಷದಿಂದ ಕೂಡಲೇ ತೆಗೆದುಹಾಕಬೇಕು ಎಂದು ಸೋನಿಯಾ ಗಾಂಧಿಯವರನ್ನು ಆಗ್ರಹಿಸಿದ್ದಾರೆ.
ನಿನ್ನೆ ಉಪಚುನಾವಣಾ ಪ್ರಚಾರದಲ್ಲಿ ತಮ್ಮ ಅಭ್ಯರ್ಥಿಯ ಪರ ಮತಯಾಚಿಸುತ್ತಿದ್ದ ಕಮಲ್ನಾಥ್, ಸುರೇಶ್ ನಮ್ಮ ಅಭ್ಯರ್ಥಿ. ಅತ್ಯಂತ ಸರಳ ವ್ಯಕ್ತಿತ್ವ ಹೊಂದಿರುವವರು. ಆಕೆಯ ಹಾಗೆ ಅಲ್ಲ. ಏನು ಆಕೆಯ ಹೆಸರು? ಎಂದು ಪ್ರಶ್ನಿಸಿದರು. ಅಲ್ಲಿ ನೆರೆದಿದ್ದ ಜನರು ಇಮರ್ತಿದೇವಿ ಎಂದರು. ಆಗ ಕಮಲ್ನಾಥ್, ನನಗಿಂತ ನಿಮಗೇ ಆಕೆಯ ಹೆಸರು ಚಿರಪರಿಚಿತ. ನೀವು ನನಗೆ ಮೊದಲೇ ಎಚ್ಚರಿಸಬೇಕಿತ್ತು. ಏನ್ ಐಟಂ ಇವಳು ಎಂದಿದ್ದರು.
ಇಮರ್ತಿ ದೇವಿ ಕಾಂಗ್ರೆಸ್ನಿಂದ ಗ್ವಾಲಿಯರ್ನ ಡಾಬ್ರಾ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಸದ್ಯ ಶಿವರಾಜ್ ಸಿಂಗ್ ಚೌಹಾಣ್ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆಯಾಗಿದ್ದಾರೆ. ಈಗ ಹಾಲಿ ಕ್ಷೇತ್ರದಿಂದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಈ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಪರವಾಗಿ ಇಂದು ಪ್ರಚಾರ ನಡೆಸಿದ ಕಮಲ್ನಾಥ್ ಇಮರ್ತಿ ದೇವಿಯವರನ್ನು ಲೇವಡಿ ಮಾಡುವ ಮೂಲಕ ಇದೀಗ ಕೆಂಗಣ್ಣಿಗೆ ಗುರಿಯಾಗಿದ್ದಾರೆ.