ಬೆಂಗಳೂರು: ಡಾನ್ ಜಯರಾಜ್ ಪುತ್ರ ಅಜಿತ್ ಜಯರಾಜ್ ನಟನೆಯ ಹೊಸ ಸಿನಿಮಾ ಇಂದು ಸೆಟ್ಟೇರಿದೆ. ನಗರ ದೇವಾಯಲಯದಲ್ಲಿ ಮುಹೂರ್ತ ಮುಗಿದಿದ್ದು, ಹಲವು ಗಣ್ಯರು ಭಾಗವಹಿಸಿದ್ದರು.
ಅಜಿತ್ ಜಯರಾಜ್ ಅಭಿನಯದ ಆನಂದ್ ರಾಜ್ ನಿರ್ದೇಶನದ ಜಾಂಟಿ S/O ಜಯರಾಜ್ ಸಿನಿಮಾದಲ್ಲಿ ಡಾನ್ ಜಯರಾಜ್ ಗೆ ಸಂಬಂಧಿಸಿದ ಕಥೆಯೂ ಇರಲಿದೆಯಂತೆ.
ಮುಹೂರ್ತದ ಬಳಿಕ ಮಾತನಾಡಿರುವ ಜಯರಾಜ್ ಪುತ್ರ ಅಜಿತ್ ಜಯರಾಜ್, ನನ್ನ ತಂದೆ ಮೃತರಾದಾಗ ನಾನು 8 ತಿಂಗಳ ಮಗು. ದೊಡ್ಡವನಾಗುತ್ತಿದ್ದಂತೆ ಅಪ್ಪನ ಬಗ್ಗೆ ತಿಳಿದುಕೊಂಡೆ. ಅವರು ಮಾಡಿರುವ ಒಳ್ಳೆಯ ಕೆಲಸಗಳು ನನ್ನನ್ನು ಕಾಯುತ್ತಿದೆ. ಎಲ್ಲೇ ಹೋದರೂ ಅವರ ಹೆಸರು ನನಗೆ ಒಳ್ಳೆಯದನ್ನೇ ಮಾಡಿದೆ. ಜಾಂಟಿ S/O ಜಯರಾಜ್ ಚಿತ್ರದಲ್ಲಿ ಡಾನ್ ಜಯರಾಜ್ ಪುತ್ರನ ಪಾತ್ರದಲ್ಲಿಯೇ ಕಾಣಿಸಿಕೊಂಡರೂ ಸಹ ರೌಡಿ ಪಾತ್ರವಲ್ಲ. ನನ್ನ ನಿಜ ಜೀವನಕ್ಕೆ ಲಿಂಕ್ ಇರುವ ಪಾತ್ರವಾದ್ದರಿಂದ ಇಷ್ಟವಾಯಿತು ಅಂದು ನಟ ಅಜಿತ್ ಜಯರಾಜ್ ತಿಳಿಸಿದ್ದಾರೆ.
ಇನ್ನು ನಿರ್ದೇಶಕ ಮಾತನಾಡಿ, ತಂದೆ ಜಯರಾಜ್ ಸಾವಿನ ಬಳಿಕ ಎದುರಾದ ಸಂಕಷ್ಟಗಳಿಂದ ಮಗ ಹೇಗೆ ಹೊರಬರುತ್ತಾರೆ ಎಂಬುದನ್ನು ತೋರಿಸಲಾಗುತ್ತದೆ. ಭೂಗತ ಚಟುವಟಿಕೆಗಳು ಇಂದಿಗೂ ಇದ್ದೇ ಇದೆ. ಅದನ್ನೂ ಸಹ ಚಿತ್ರದಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ನಿರ್ದೇಶಕ ಆನಂದ್ ರಾಜ್ ವಿವರಿಸಿದರು.