ಬೆಂಗಳೂರು : ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ನಮ್ಮ ಜನರೇಕೆ ಇದನ್ನು ಕಿವಿಗೆ ಹಾಕಿಕೊಳ್ಳುವ ಗೋಜಿಗೇ ಇನ್ನೂ ಹೋಗುತ್ತಿಲ್ಲ. ಆದರೆ ಇನ್ನು ಮುಂದೆ ಬೈಕ್ ಸವಾರ ಮತ್ತು ಹಿಂಬದಿ ಸವಾರ ಹೆಲ್ಮೆಟ್ ಧರಿಸದಿದ್ದರೆ ಕಾದಿದೆ ಬಹುದೊಡ್ಡ ಗ್ರಹಚಾರ. ಯಾಕೆ ಅಂತೀರಾ ಇಲ್ಲಿದೆ ಡಿಟೇಲ್ಸ್
ಕೇಂದ್ರ ಮೋಟಾರು ವಾಹನ ಕಾಯ್ದೆಯಂತೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಆದರೆ ಹೆಲ್ಮೆಟ್ ಧರಿಸದೇ ಓಡಾಡುತ್ತಿದ್ದರಿಂದ ಪೊಲೀಸರು ದಂಡವನ್ನಷ್ಟೇ ಕಟ್ಟಿಸಿಕೊಳ್ಳುತ್ತಿದ್ದರು. ಆದರೆ ಇದೀಗ ದಂಡದ ಜೊತೆ ಹೆಲ್ಮೆಟ್ ಧರಿಸದೇ ಓಡಾಡುವವರ ಲೈಸೆನ್ಸ್ ಕೂಡ ಮೂರು ತಿಂಗಳ ಅವಧಿಗೆ ರದ್ದಾಗಲಿದೆ.
ಇದೀಗಾಗಲೇ ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದರ ವಿಧಿಸಿ ನಂತರ ಕಡಿತಗೊಳಿಸಿದ್ದ ರಾಜ್ಯ ಸರ್ಕಾರ ಇದೀಗ ದ್ವಿಚಕ್ರ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದೆ . ಅಪಘಾತ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ಹೆಲ್ಮೆಟ್ ಧರಿಸದೇ ಸಂಚರಿಸುವವರ ವಿರುದ್ಧ ಮೋಟಾರ್ ವಾಹನ ಕಾಯ್ದೆ 1988 ಕಲಂ 194 ಡಿ ಅನ್ವಯ ಸರ್ಕಾರ ಈ ಆದೇಶ ಹೊರಡಿಸಿದ್ದು ದಂಡ ವಸೂಲಾತಿಯೊಂದಿಗೆ 3 ತಿಂಗಳ ಪರವಾನಿಗೆಯನ್ನು ರದ್ದುಪಡಿಸುವ ನಿರ್ಧಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ, ಸಹಾಯಕ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ಗೆ ಸೂಚಿಸಲಾಗಿದೆ .