ಬೆಂಗಳೂರು ; ಆರ್ ಆರ್ ನಗರದಲ್ಲಿ ಡಿ ಕೆ ರವಿ ಪತ್ನಿ ಕುಸುಮಾ ರನ್ನು ಕಣಕ್ಕಿಳಿಸಿ ಕಾಂಗ್ರೆಸ್ ಜಾತಿ ರಾಜಕಾರಣ ಮಾಡುತ್ತಿದೆ ಎಂಬ ಜೆಡಿಎಸ್ ಆರೋಪಕ್ಕೆ ಡಿಕೆ ಶಿವಕುಮಾರ್ ಉತ್ತರಿಸಿದ್ದಾರೆ. ನನ್ನ ಪೋಷಕರು ಒಕ್ಕಲಿಗರು ಆದ ಕಾರಣ ನಾನು ಒಕ್ಕಲಿಗನಾದೆ. ನಾನು ಒಕ್ಕಲಿಗ ಎಂಬುದಕ್ಕೆ ನನಗೆ ಹೆಮ್ಮೆ ಇದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೇಂದ ಮಾತ್ರಕ್ಕೆ ನಾನು ಜಾತಿ ರಾಜಕಾರಣ ಮಾಡುತಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷನಾಗಿರುವ ನನ್ನ ಜಾತಿ ಕಾಂಗ್ರೆಸ್ ಮಾತ್ರ. ಹಾಗಿದ್ದಾಗ ಬೇರೆ ಜಾತಿ ಬಗ್ಗೆ ನಾನ್ಯಾಕೆ ಮಾತನಾಡಲಿ. ಜನರನ್ನು ಪಕ್ಷದತ್ತ ಸೆಳೆಯಲು ಯಾವುದೇ ರಾಜಕೀಯ ನಡೆಯುವುದಿಲ್ಲ. ಈ ರೀತಿಯ ಜಾತಿ ವಿಷಯಗಳ ಮುನ್ನಲೆಗೆ ಬರುವುದು ಚುನಾವಣೆ ವೇಳೆ ಮಾತ್ರ. ಚುನಾವಣೆ ಸಮಯದಲ್ಲಿ ನಮ್ಮ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಮ್ಮ ನಾಯಕರನ್ನು ಭೇಟಿಯಾಗುತ್ತಾರೆ. ಇದು ಸಾಮಾನ್ಯವಾಗಿ ನಡೆಯುವಂತಹದ್ದು. ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಆರ್ ಆರ್ ನಗರ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ನಿರ್ಣಯಕವಾಗಿರುವುದರಿಂದ ಎರಡು ಪಕ್ಷದ ನಾಯಕರು ಸಮುದಾಯದ ಜನರನ್ನು ಸೆಳೆಯುವಲ್ಲಿ ಹರಸಾಹಸ ನಡೆಸುತ್ತಿದ್ದಾರೆ. ಅಲ್ಲದೇ ಈ ಕ್ಷೇತ್ರದಲ್ಲಿನ ಗೆಲುವು ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ಗೆ ಅನಿವಾರ್ಯವಾಗಿದ್ದು, ಈ ಹಿನ್ನಲೆ ಈ ಕಣ ಪ್ರತಿಷ್ಠೆಯಾಗಿ ರೂಪುಗೊಂಡಿದೆ.
ನವೆಂಬರ್ 3 ರಂದು ಆರ್ ಆರ್ ನಗರದ ಉಪಚುನಾವಣೆ ನಡೆಯಲಿದೆ. ಕಾಂಗ್ರೆಸ್ ನಿಂದ ಐಎಎಸ್ ಅಧಿಕಾರಿ ದಿವಂಗತ ಡಿ ಕೆ ರವಿ ಅವರ ಪತ್ನಿ ಕುಸುಮಾ, ಬಿಜೆಪಿಯಿಂದ ಮುನಿರತ್ನ, ಜೆಡಿಎಸ್ ನಿಂದ ಜ್ಞಾನಭಾರತಿ ಕೃಷ್ಣಮೂರ್ತಿ ಸ್ಪರ್ಧೆಯಲ್ಲಿದ್ದು, ಮತದಾರರು ಯಾರ ಕಡೆಗೆ ಒಲವು ತೋರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.