ಬೆಂಗಳೂರು : ಮುಂದಿನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಎಂಬ ಸುದ್ದಿಗಳು ಕೆಲವು ದಿನಗಳಿಂದ ಸಾಕಷ್ಟು ಓಡಾಡುತ್ತಿವೆ. ಫೆಸ್ ಬುಕ್ ನಲ್ಲಿ ಕೂಡ ಈಗಾಗಲೇ ಡಿಕೆಶಿ ಮುಂದಿನ ಮುಖ್ಯಮಂತ್ರಿ ಅನ್ನೋ ಪೇಜ್ ಕೂಡ ಆರಂಭಿಸಿ ಪ್ರಚಾರ ಕೊಡುತ್ತಿದ್ದಾರೆ. ಅದರ ಜೊತೆಗೆ ನಿನ್ನೆ ಪ್ರಚಾರದ ವೇಳೆ ಶಾಸಕಿ ಸೌಮ್ಯಾ ರೆಡ್ಡಿ ಹಾಗೂ ಕುಸುಮಾ ತಂದೆ ಹನುಮಂತರಾಯಪ್ಪ ಕೂಡ ಮುಂದಿನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಎಂದಿದ್ದರು. ಇದಕ್ಕೆ ಇಂದು ಡಿ ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ, ಡಿಕೆ ಶಿವಕುಮಾರ್, ನನ್ನ ಮೇಲಿನ ಪ್ರೀತಿ ಹಾಗೂ ಅಭಿಮಾನದಿಂದ ಆ ಮಾತನ್ನ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಆಯ್ಕೆ ಮಾಡೋದು ಹೈಕಮಾಂಡ್ ಹಾಗೂ ಶಾಸಕರು. ಮೊದಲು ನಾವೂ ಅಧಿಕಾರಕ್ಕೆ ಬರಬೇಕು ಅನ್ನೋದು ನಮ್ಮ ಗುರಿ. ಸಾಮೂಹಿಕ ನಾಯಕತ್ವದಲ್ಲಿ ನನಗೆ ನಂಬಿಕೆ ಇದೆ.
ಇದೇ ವೇಳೆ ಜಮೀರ್ ಅಹ್ಮದ್ ಖಾನ್ ಹೇಳಿಕೆಯನ್ನು ಎಮೋಷನಲ್ ಹೇಳಿಕೆ ಎಂದು ವ್ಯಾಖ್ಯಾನಿಸಿದ್ದಾರೆ. ನಿನ್ನೆ ಜಮೀರ್ ಅಹ್ಮದ್ ಮುಂದಿನ ಸಿಎಂ ಸಿದ್ದರಾಮಯ್ಯ ಅವರೇ. ಅವರು ಸಿಎಂ ಆಗೋದನ್ನ ಯಾರು ತಪ್ಪಿಸೋಕೆ ಆಗಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಡಿ ಕೆ ಶಿವಕುಮಾರ್, ಜಮೀರ್ ಖಾನ್ ನನ್ನ ಸ್ನೇಹಿತ. ಒಮ್ಮೊಮ್ಮೆ ಎಮೋಷನಲ್ಲಾಗಿ ಏನೇನೋ ಹೇಳ್ತಾರೆ ಎಂದಿದ್ದಾರೆ.
ಆರ್ ಆರ್ ನಗರ ಉಪಚುನಾವಣೆಗೆ ದಿನಗಣನೆ ಶುರುವಾಗಿದ್ದು, ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ಆರಂಬವಾಗಿದೆ. ಶತಾಯಗತಾಯ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲೇ ಬೇಕೆಂಬುದು ಎಲ್ಲಾ ಪಕ್ಷಗಳಲ್ಲೂ ಇದೆ.
ಇನ್ನು ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಓಲಾ, ಉಬರ್ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹಾಗೂ ಅಖಿಲ ಕರ್ನಾಟಕ ಆದರ್ಶ ಆಟೋ ಚಾಲಕರ ಸಂಘದ ಅಧ್ಯಕ್ಷ ಚಂದ್ರು ಅವರು ತಮ್ಮ ಬೆಂಬಲಿಗ ಸಮೂಹದೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತಿರರು ಹಾಜರಿದ್ದರು.