ಕಲಬುರಗಿ: ಸಿಬಿಐ ನೋಟೀಸ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ವಿರುದ್ಧ ಎಫ್.ಐ.ಆರ್. ಹಾಕೋ ಜೊತೆಗೆ ನೋಟೀಸ್ ಸಹ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ರಾಜಕೀಯ ಕುಮ್ಮಕ್ಕು ಇಲ್ಲದಿದ್ದಲ್ಲಿ ಸಿಬಿಐ ಅಧಿಕಾರಿಗಳು ಈ ರೀತಿ ವರ್ತಿಸುತ್ತಿರಲಿಲ್ಲ. ಅವರು ಏನು ಬೇಕಾದ್ರೂ ಮಾಡಿಕೊಳ್ಳಲಿ. ಆದ್ರೆ ಸಿಬಿಐ ಅಧಿಕಾರಿಗಳು ನ್ಯಾಯ ಸಮ್ಮತ ತನಿಖೆ ನಡೆಸಲಿ. ನಾನು ಕಾನೂನಿಗೆ ಗೌರವ ಕೊಡ್ತೇನೆ ಎಂದಿದ್ದಾರೆ.
ಇನ್ನು ನಾಳೆ ಸಿಬಿಐ ಕಛೇರಿಗೆ ವಿಚಾರಣೆಗೆ ಹಾಜರಾಗ್ತೇನೆ. ಯಾರೂ ಸಹ ಗಾಬರಿಪಟ್ಟುಕೊಳ್ಳಬೇಡಿ, ಸಿಬಿಐ ಕಛೇರಿ ಕಡೆ ಬರಬೇಡಿ. ನನ್ನ ಪರವಾದ ಹೇಳಿಕೆಗಳನ್ನೂ ನೀಡಬೇಡಿ ಎಂದು ಕಾಂಗ್ರೆಸ್ ಮುಖಂಡರಿಗೆ ಡಿಕೆಶಿ ಮನವಿ ಮಾಡಿದ್ದಾರೆ.
ಕಲಬುರ್ಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ನನಗೆ ತೊಂದರೆ ಕೊಟ್ಟವರು ಯಾವಾಗಲೂ ಖುಷಿಯಾಗಿಯೇ ಇರಲಿ. ನನ್ನ ಮಗಳ ನಿಶ್ಚಿತಾರ್ಥದ ದಿನವೇ ನನಗೆ ಸಿಬಿಐ ನೋಟೀಸ್ ನೀಡಿದ್ದಾರೆ. ಇಡೀ ರಾಜ್ಯದಲ್ಲಿ ಯಾವ ಶಾಸಕರಿಗೂ ನೋಟೀಸ್ ನೀಡಿಲ್ಲ. ಆದ್ರೆ ನನಗೆ ಮಾತ್ರ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಿಬಿಐ ಅಧಿಕಾರಿಗಳು ಇಂತಹ ಪ್ರಕರಣದಲ್ಲಿ ಜಾಗೃತರಾಗಿ ಕೆಲಸ ಮಾಡಲಿದ್ದಾರೆ. ಅವರು ನನಗೆ ಯಾವುದೇ ಸಹಾಯ ಮಾಡುವುದು ಬೇಡ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ಸಾಕು. ಅವರು ಕೇಳುವ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತೇನೆ. ರಾಜ್ಯದಲ್ಲಿ ಇದುವರೆಗೂ ಯಾವುದೇ ಶಾಸಕನ ಮೇಲೆ ಸಿಬಿಐ ತನಿಖೆಗೆ ಆದೇಶ ನೀಡಿರಲಿಲ್ಲ. ಆದರೆ ನನ್ನ ಪ್ರಕರಣವನ್ನು ವಿಶೇಷವಾಗಿ ಕೊಟ್ಟಿದ್ದಾರೆ. ಇದನ್ನು ಜಯಿಸಿ ಬರುವ ವಿಶ್ವಾಸ ನನಗಿದೆ ಎಂದರು.