ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣ ಮತ್ತು ಶಾಸಕರ ಮನೆಗೆ ಬೆಂಕಿಯಿಟ್ಟ ಪ್ರಕರಣದಲ್ಲಿ ಬಂಧಿತರಾಗಿರುವ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಗಲಭೆಯ ನಂತರ ಮಾಜಿ ಮೇಯರ್ ತಲೆಮರೆಸಿಕೊಂಡಿದ್ದರು. ಸತತ 22 ದಿನಗಳ ನಂತರ ಪತ್ತೆಯಾಗಿ ಬಂಧಿಯಾಗಿದ್ದರು. ಈ 22 ದಿನಗಳಲ್ಲಿ ಎಡೆಬಿಡದೆ ಓಡಾಟ ನಡೆಸಿದ್ದರು. ಈ ಸಮಯದಲ್ಲಿ ಅವರ ಆರೋಗ್ಯ ಹದಗೆಟ್ಟಿತ್ತು. ಅಲ್ಲದೇ ಅವರ ತೂಕದಲ್ಲೂ ಕೂಡಾ ಭಾರೀ ಇಳಿಕೆಯಾಗಿತ್ತು.
ಮಾಜಿ ಮೇಯರ್ ಸಂಪತ್ ರಾಜ್ನನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿ ನ.20ರಂದು ಜೈಲಿಗೆ ಕಳಿಸಿದ್ದರು. ಜೈಲು ಸೇರಿದ ಒಂದು ದಿನ ಮಾತ್ರ ಜೈಲು ಕ್ವಾರಂಟೈನ್ನಲ್ಲಿದ್ದ ಸಂಪತ್ ರಾಜ್ ಬಳಿಕ ಜೈಲಿನ ಆಸ್ಪತ್ರೆಯ ಸ್ಪೆಷಲ್ ವಾರ್ಡ್ನಲ್ಲಿದ್ದರು. ಇಂದು ಜೈಲಿನ ಸಿಬ್ಬಂದಿ ಸಂಪತ್ರಾಜ್ನನ್ನ ವೈದ್ಯಕೀಯ ತಪಾಸಣೆಗೆ ಕರೆತಂದಿದ್ದು ತಪಾಸಣೆ ಬಳಿಕ ರಿಪೋರ್ಟ್ ಆಧರಿಸಿ ಚಿಕಿತ್ಸೆಗೆ ನಿರ್ಧರಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಸಂಪತ್ ರಾಜ್ ಅವರ ಆರೋಗ್ಯ ಪರಿಶೀಲನೆ ನಡೆಯುತ್ತಿದೆ.
ಸಂಪತ್ ರಾಜ್ ಬಂಧನದ ಬಳಿಕ ಆರೋಪಿ ಪರ ವಕೀಲರು ನ್ಯಾಯಾಲಯದಲ್ಲಿ ಸಂಪತ್ ರಾಜ್ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಸರಿಯಾದ ಚಿಕಿತ್ಸೆ ಅವಶ್ಯಕತೆ ಇದೆ ಎಂದು ವಾದ ಮಾಡಿದ್ದರು. ಹೀಗಾಗಿ ನ್ಯಾಯಾಲಯ ಅನಿವಾರ್ಯತೆ ಇದ್ದರೆ ಚಿಕಿತ್ಸೆ ಪಡೆಯುವಂತೆ ಸೂಚಿಸಿತ್ತು. ಸದ್ಯ ಕೋರ್ಟ್ ಸೂಚನೆಯನ್ನೇ ಆಧರಿಸಿ ಆರೋಪಿ ಸಂಪತ್ ರಾಜ್ ಆಸ್ಪತ್ರೆಗೆ ದಾಖಲಾಗಿದ್ದಾರೆ.