ಬೆಂಗಳೂರು: ಇಂದಿನಿಂದ ದೀಪಾವಳಿ ಹಬ್ಬ ಶುರುವಾಗಿದೆ. ಕೊರೊನಾ ಭಯದ ನಡುವೆಯೂ ಎಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿದೆ. ಹಬ್ಬ ಒಂದು ವಾರವಿರುವಾಗಿನಿಂದಲೂ ಜನ ಕೊರೊನಾ ಎಂಬ ವೈರಸ್ ಇದೆ ಎಂಬುದನ್ನೇ ಮರೆತು ಶಾಪಿಂಗ್ ನಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಬನಶಂಕರಿ, ಗಾಂಧಿ ಬಜಾರ್, ಕೆಆರ್ ಮಾರುಕಟ್ಟೆ, ಮಲ್ಲೇಶ್ವರಂ ಮೊದಲಾದ ಮಾರುಕಟ್ಟೆಗಳಲ್ಲಿ ಹೂ, ಹಣ್ಣು, ತರಕಾರಿ ವ್ಯಾಪಾರ ಬಲುಜೋರಾಗಿದೆ. ಮಲ್ಲೇಶ್ವರಮ್ನ ಹೂ ಮಾರುಕಟ್ಟೆ ಮಾತ್ರ ತುಸು ಬಿಕೋ ಎನ್ನುತ್ತಿದೆ. ಚಿಕ್ಕಪೇಟೆಯಲ್ಲಿ ಕಳೆದ ಒಂದು ವಾರದಿಂದಲೂ ಹಬ್ಬಕ್ಕೆ ಬಟ್ಟೆ ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಮಾರುಕಟ್ಟೆಗಳಲ್ಲಿ ವ್ಯಾಪಾರ ಜೋರಾಗಿದ್ದು, ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಎಷ್ಟೋ ಜನ ಆಯುಧ ಪೂಜೆಯ ಬದಲು ದೀಪಾವಳಿ ಹಬ್ಬದಲ್ಲೇ ವಾಹನಗಳನ್ನು ಪೂಜೆ ಮಾಡುತ್ತಾರೆ. ಲಕ್ಷ್ಮೀ ಪೂಜೆ, ಗೋ ಪೂಜೆ ಹೀಗೆ ಪೂಜೆಗಳಿಗೆ ಹೂ ಮತ್ತು ಹಣ್ಣಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆ ದರಗಳು ಗಗನಕ್ಕೇರಿವೆ.
ಬೆಂಗಳೂರಿನಲ್ಲಿ ಮಲ್ಲಿಗೆ ಕೆಜಿಗೆ 800 ರೂಪಾಯಿ ಇದೆ. ಚೆಂಡು ಹೂ, 100 ರೂ. ಕೆಜಿ, ಸೇವಂತಿಗೆ ಹೂ – 200 ರೂ. ಕೆಜಿ, ಕಾಕಡ ಹೂ – 1200 ರೂ. ಕೆಜಿ, ಗುಲಾಬಿ ಹೂ – 300 ರೂ. ಕೆಜಿ, ತುಳಸಿ – 500 ರೂ. ಒಂದು ದೊಡ್ಡ ಹಾರಕ್ಕೆ ಇದೆ.
ಇನ್ನು ಹಣ್ಣು ಬೆಲೆ ನೋಡುವುದಾದರೆ, ಸೇಬು – 120 ರೂ. ಕೆಜಿ, ಮೂಸಂಬಿ – 100 ರೂ. ಕೆಜಿ, ದಾಳಿಂಬೆ – 150-200 ರೂ. ಕೆಜಿ, ಸೀತಾಫಲ – 120 ರೂ. ಕೆಜಿ, ದ್ರಾಕ್ಷಿ – 200 ರೂ. ಕೆಜಿ, ಬಾಳೆಹಣ್ಣು 80 ರೂ. ಕೆಜಿ, ಸಪೋಟಾ – 100 ರೂ. ಕೆಜಿಗೆ ಇದೆ.
ವ್ಯಾಪಾರ ತರಲು ಮಾರುಕಟ್ಟೆಗೆ ಹೋದ ಜನ ಹಣ್ಣು, ಹೂಗಳಲ್ಲಿ ಆಗಿರುವ ಬೆಲೆ ನೋಡಿ ದಂಗಾಗಿದ್ದಾರೆ. ಇತ್ತ ಚೌಕಾಸಿ ಮಾಡಲು ಆಗದೆ, ಹೆಚ್ಚು ವ್ಯಾಪಾರ ಮಾಡಲು ಆಗದೆ ಗೊಣಕಿಕೊಂಡು ಬಂದಷ್ಟು ತೆಗೆದುಕೊಂಡು ಮನೆ ಸೇರುತ್ತಿದ್ದಾರೆ.