ಬೆಂಗಳೂರು: ಇತ್ತೀಚೆಗೆ ಆನ್ ಲೈನ್ ನಲ್ಲೆ ವ್ಯವಹಾರ ನಡೆಸೋದು ತುಂಬಾ ಸಹಜವಾಗಿ ಹೋಗಿದೆ. ತರಕಾರಿ ಆಗ್ಲಿ, ಹಣ್ಣಾಗಲಿ ಏನನ್ನು ಅಂಗಡಿ ಹೋಗಿ ತರುವಷ್ಟು ಸಮಯ ಕೆಲವರಲ್ಲಿ ಇಲ್ಲ. ಮೊಬೈಲ್ ಕೈನಲ್ಲಿರುವಾಗ ಮನೆ ಬಾಗಿಲಿಗೆ ಐಟಂ ಬರುವಾಗ ಅಷ್ಟು ದೂರ ಹೋಗುವುದು ಯಾಕೆ ಎಂಬ ಮನಸ್ಥಿತಿ ಬಹಳಷ್ಟು ಜನರ ಮನಸ್ಸಲ್ಲಿ ಬೆಳೆದಿದೆ. ಆದ್ರೆ ಅಂತ ಮನಸ್ಥಿತಿಗಳೇ ಕೆಲವೊಮ್ಮೆ ತೊಂದರೆಗೀಡು ಮಾಡುತ್ತದೆ.
ಬೆಂಗಳೂರು ಮೂಲದ ಬಿಗ್ ಬಾಸ್ಕೆಟ್ ಕಂಪನಿಯ ಗ್ರಾಹಕರು ಆತಂಕ ಪಡುವ ಸುದ್ದಿಯೊಂದು ಹೊರಬಿದ್ದಿದೆ. ತಮ್ಮ ಕಂಪನಿಯ ಕೆಲ ಡೇಟಾಗಳು ಕಳುವಾದ ಬಗ್ಗೆ ಬೆಂಗಳೂರು ಸೈಬರ್ ಕ್ರೈಂ ವಿಭಾಗಕ್ಕೆ ಕಂಪನಿ ಶನಿವಾರ ದೂರು ನೀಡಿದೆ.
ಗ್ರಾಹಕರ ಇ ಮೇಲ್ ಐಡಿ, ಹೆಸರು, ವಿಳಾಸ, ಫೋನ್ ನಂಬರ್, ಪಾಸ್ ವರ್ಡ್ ಮುಂತಾದ ದಾಖಲೆಗಳಿರುವ 2 ಕೋಟಿ ಗ್ರಾಹಕರ ದತ್ತಾಂಶವನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿ ಅ.14 ರಂದು ಕಳ್ಳತನ ಮಾಡಿದ್ದಾರೆ. ಅದನ್ನು ಆನ್ಲೈನ್ ನಲ್ಲಿ 40 ಸಾವಿರ ಡಾಲರ್ ಗೆ ಮಾರಾಟಕ್ಕಿಟ್ಟ ಬಗ್ಗೆ ಅಮೆರಿಕಾದ ಸೈಬರ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಂಪನಿ ಸೈಬೆಲ್ ಅ. 30 ರಂದು ಗುರುತಿಸಿ ನ. 1 ರಂದು ನಮಗೆ ಮಾಹಿತಿ ನೀಡಿದೆ ಎಂದು ಬಿಗ್ ಬಾಸ್ಕೆಟ್ ತಿಳಿಸಿದೆ.
“ನಾವು ಗ್ರಾಹಕರ ಮಾಹಿತಿಯ ಗೌಪ್ಯತೆಗೆ ಹೆಚ್ಚಿನ ಮಹತ್ವ ನೀಡುತ್ತೇವೆ. ಕ್ರೆಡಿಟ್ ಕಾರ್ಡ್ ನಂಬರ್ ನಂಥ ಹೆಚ್ಚಿನ ಆರ್ಥಿಕ ವ್ಯವಹಾರದ ದಾಖಲೆಗಳನ್ನು ನಾವು ಸಂಗ್ರಹಿಸುವುದಿಲ್ಲ. ಇದರಿಂದ ಗ್ರಾಹಕರು ಆತಂಕ ಪಡುವ ಅವಶ್ಯಕತೆ ಇಲ್ಲ” ಎಂದು ಕಂಪನಿ ಪ್ರಕಟಣೆ ತಿಳಿಸಿದೆ.
ಅಮೆಜಾನ್, ಫ್ಲಿಪ್ ಕಾರ್ಟ್ ಅಥವಾ ಬಿಗ್ಬಾಸ್ಕೆಟ್ ಮತ್ತು ಗ್ರೋಫರ್ಸ್ ಸೇರಿದಂತೆ ಯಾವುದೇ ಇ-ಕಾಮರ್ಸ್ ಪ್ಲಾಟ್ಫಾರ್ಮ್ ನಲ್ಲಿ ಶಾಪಿಂಗ್ ಮಾಡುವಾಗ ಮತ್ತು ಆನ್ಲೈನ್ ಪಾವತಿ ಮಾಡುವಾಗ ಡೆಬಿಟ್ /ಕ್ರೆಡಿಟ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಅಲ್ಲಿಂದ ಮುಂದೆ ಮಾಡುವ ವ್ಯವಹಾರಗಳು ಸಲೀಸಾಗಲಿ ಎಂಬ ಕಾರಣಕ್ಕೆ ಅಪ್ಲಿಕೇಷನ್ ನಲ್ಲಿ ಸಂಗ್ರಹಿಸಲಾಗುತ್ತದೆ.
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಸಂಖ್ಯೆ, ಸಿವಿವಿ ಜೊತೆಗೆ, ಗ್ರಾಹಕರ ಫೋನ್ ನಂಬರ್ ಗಳು, ವಿಳಾಸವನ್ನು ಸಹ ನಮೂದಿಸುತ್ತಾರೆ. ಯುಎಸ್ ಮೂಲದ ಸೈಬರ್ ಸೆಕ್ಯೂರಿಟಿ ಇಂಟೆಲಿಜೆನ್ಸ್ ಸಂಸ್ಥೆ ಸೈಬಲ್ ಪ್ರಕಾರ, ಬಿಗ್ ಬ್ಯಾಸ್ಕೆಟ್ ಗೆ ಸೇರಿದ 4 ಕೋಟಿಗೂ ಹೆಚ್ಚಿನ ಬಳಕೆದಾರರ ಸೂಕ್ಷ್ಮ ದತ್ತಾಂಶ ಬಯಲಾಗಿದೆ ಎನ್ನಲಾಗಿದೆ.
ಬಿಗ್ ಬ್ಯಾಸ್ಕೆಟ್ ದತ್ತಾಂಶ ಸೋರಿಕೆಯನ್ನು ಒಪ್ಪಿಕೊಂಡಿದ್ದು, ಹ್ಯಾಕರ್ ಗಳ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದೆ. ಇನ್ನು ಈಗ ಸೋರಿಕೆ ಆಗಿರುವ ದತ್ತಾಂಶ ಅಂದರೆ, ಅದು ಫೋನ್ ನಂಬರ್ ಗಳು ಹಾಗೂ ವಿಳಾಸ ಮಾತ್ರ ಎಂದು ಹೇಳಿಕೊಂಡಿದೆ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳು ಸೋರಿಕೆ ಆಗಿಲ್ಲ ಎಂದಿದೆ.
“ಸೈಬರ್ ದಾಳಿ ಪತ್ತೆಯಾದದ್ದರ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಸಲುವಾಗಿ ಕ್ರಮಗಳನ್ನು ತೆಗೆದುಕೊಳ್ಳಲು ನಾವು ಎಲ್ಲಾ ಡೇಟಾ ಸೆಂಟರ್ ಸೇವೆಗಳನ್ನು ಪ್ರತ್ಯೇಕಿಸಿದ್ದೇವೆ. ಎಲ್ಲಾ ಸೇವೆಗಳು 24 ಗಂಟೆಗಳ ಒಳಗೆ ಮತ್ತೆ ಶುರು ಆಗಲಿವೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಮತ್ತು ಈ ಘಟನೆಯಿಂದಾಗಿ ನಮ್ಮ ಕಾರ್ಯಾಚರಣೆಗಳ ಮೇಲೆ ಯಾವುದೇ ದೊಡ್ಡ ಪರಿಣಾಮ ಆಗುವುದಿಲ್ಲ,” ಎಂದು ಡಾ ರೆಡ್ಡೀಸ್ ಮುಖ್ಯ ಮಾಹಿತಿ ಅಧಿಕಾರಿ ಮುಕೇಶ್ ರಾಟಿ ಹೇಳಿಕೆಯಲ್ಲಿ ತಿಳಿಸಿದ್ದರು.