ನವದೆಹಲಿ: ದೆಹಲಿಯಲ್ಲಿ ದಿನೇ ದಿನೇ ವಾಯುಮಾಲಿನ್ಯ ಹೆಚ್ಚಾಗುತ್ತಲೇ ಇದೆ. ಇದರಿಂದ ಅಲ್ಲಿನ ಜನ ಆತಂಕದಲ್ಲೇ ದಿನದೂಡುತ್ತಿದ್ದಾರೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಮಾಹಿತಿ ಪ್ರಕಾರ 24 ಗಂಟೆಗಳಲ್ಲಿ ದೆಹಲಿ ವಿಶ್ವ ವಿದ್ಯಾಲಯ ಪ್ರದೇಶದಲ್ಲಿ 397. ನೋಯ್ಡಾ ಸುತ್ತಾ ಮುತ್ತಾ 361. ಪೂಸಾ ಪ್ರದೇಶದ ವ್ಯಾಪ್ತಿಯಲ್ಲಿ 353. ದೆಹಲಿ ಐಐಟಿ ಪ್ರದೇಶಗಳಲ್ಲಿ 369 ಇದೆ. ಗಾಳಿಯ ಗುಣಮಟ್ಟವು 300 ಅಂಕದ ಮೇಲಿದ್ದರೆ ಅದನ್ನು ‘ಅತ್ಯಂತ ಕಳಪೆ’ ಎಂದು ವ್ಯಾಖ್ಯಾನಿಸಲಾಗುತ್ತದೆ. ಅಲ್ಲದೆ ಅಂತಹ ಗಾಳಿಯನ್ನು ‘ಉಸಿರಾಡಲು ಅನರ್ಹ’ ಎಂದು ಕೂಡ ಹೇಳಲಾಗುತ್ತದೆ.
ಇದಲ್ಲದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸಲಾಗುತ್ತದೆ. ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಗೋಧಿ ಬೆಳೆಯ ತ್ಯಾಜ್ಯವನ್ನು ಸುಡಲಾಗುತ್ತದೆ. ಹಿಂದಿನಿಂದಲೂ ಇದು ನಡೆದುಕೊಂಡು ಬಂದಿಋುವ ಪದ್ಧತಿ. ಅಲ್ಲಿ ತ್ಯಾಜ್ಯ ಸುಟ್ಟಾಗ ಹೊಮ್ಮುವ ಹೊಗೆ ದೆಹಲಿಯ ಕಡೆಗೆ ಬರಲಿದೆ. ತ್ಯಾಜ್ಯ ಸುಡುವುದನ್ನು ತಪ್ಪಿಸಲು ಈವರೆಗೆ ಯಾವುದೇ ವೈಜ್ಞಾನಿಕ ಕ್ರಮ ಕೈಗೊಂಡಿಲ್ಲ. ರೈತರಿಗೆ ಪರ್ಯಾಯ ಮಾರ್ಗವನ್ನು ಹೇಳಿಕೊಟ್ಟಿಲ್ಲ. ಪರಿಹಾರದ ವ್ಯವಸ್ಥೆಯನ್ನೂ ಮಾಡಿಕೊಟ್ಟಿಲ್ಲ. ಈ ಎಲ್ಲಾ ಕಾರಣಗಳಿಂದ ದೆಹಲಿಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಯುಮಾಲಿನ್ಯ ಹೆಚ್ಚಾಗುವುದು ಸಾಮಾನ್ಯವಾಗಿದೆ.
ಆದರೆ ಈ ಬಾರಿ ದೆಹಲಿಯಲ್ಲಿ ಬೆಳೆ ತ್ಯಾಜ್ಯ ಸುಡುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಾಗಿತ್ತು. ಇದಲ್ಲದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿತ್ತು. ಇಷ್ಟೆಲ್ಲಾ ಕ್ರಮಗಳನ್ನು ಕೈಗೊಂಡಿದ್ದರೂ ದೆಹಲಿಯ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಾರದೇ ಇರುವುದು ಸಹಜವಾಗಿ ಜನರಲ್ಲಿ ಆತಂಕವನ್ನು ಉಂಟುಮಾಡಿದೆ.