ಇತ್ತೀಚೆಗೆ ಮಾನವೀಯತೆ ಅನ್ನೋದು ಎಲ್ಲಿದೆ ಅಂತ ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೋಗುತ್ತಿರುವ ರಸ್ತೆಯಲ್ಲಿ ಯಾರಾದ್ರೂ ಸಾಯುತ್ತಾ ಬಿದ್ದಿದ್ರು ಅವರನ್ನ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವಂತ ಮಾನವೀಯತೆಯೇ ಉಳಿದಿಲ್ಲ. ಇಂಥ ಸಮಯದಲ್ಲಿ ಸತ್ತ ಅನಾಥರ ಅಂತ್ಯಕ್ರಿಯೆ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುವುದು ಸಾಧ್ಯವಾ..? ಆದ್ರೆ ಈ ಕೆಲಸವನ್ನ ದಕ್ಷಿಣ ಕನ್ನಡ ಜನತೆ ಮಾಡಿ ತೋರಿಸಿದ್ದಾರೆ.
ಭಿಕ್ಷುಕರೆಂದರೆ ದೂರ ತಳ್ಳುವವರೇ ಹೆಚ್ಚು. ಆದ್ರೆ ದಕ್ಷಿಣಕನ್ನಡ ಜಿಲ್ಲೆಯ ನೆಲ್ಯಾಡಿ, ಕೊಕ್ಕಡದಲ್ಲಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕನ ಅಂತ್ಯಕ್ರಿಯೆಯನ್ನು ವಿಧಿ ವಿಧಾನಗಳಂತೆ ಮಾಡಿ ಮಾನವೀಯತೆ ಇನ್ನು ಜೀವಂತವಾಗಿದೆ ಎಂದು ತೋರಿಸಿದ್ದಾರೆ.
ಶಂಕರ್ ಎಂಬಾತ 25 ವರ್ಷಗಳ ಹಿಂದೆ ನೆಲ್ಯಾಡಿ ಹಾಗೂ ಕೊಕ್ಕಡದಲ್ಲಿ ದಿಢೀರನೆ ಪ್ರತ್ಯಕ್ಷನಾಗಿದ್ದ. ಆದ್ರೆ ಆತನ ಹಾವ-ಭಾವ ಕಂಡು ಆ ಭಾಗದ ಜನ ಆತನನ್ನು ಭಿಕ್ಷುಕ ಎಂದು ಗುರುತಿಸಿಯೇ ಇರಲಿಲ್ಲ. ಅಜಾನುಬಾಹುವಾಗಿದ್ದ ಹೀಗಾಗಿ ಆತ ಭಿಕ್ಷುಕ ಅಂತ ಎನಿಸುತ್ತಿರಲಿಲ್ಲವಂತೆ.
ಜೊತೆಗೆ ಆತ ಯಾರ ಬಳಿಯೂ ಮಾತನಾಡದೆ, ತನ್ನ ಪಾಡಿಗೆ ತಾನು ಇರುತ್ತಿದ್ದಂತೆ. ಹೀಗಾಗಿ ಈತನನ್ನು ನೆಲ್ಯಾಡಿ ಭಾಗದ ಜನ ಸಿಐಡಿ ಶಂಕರ್ ಎಂದೇ ಹೇಳುತ್ತಿದ್ದರಂತೆ. ಆ ಪ್ರದೇಶದ ಹೋಟೆಲ್ ಮಂದಿ ನೀಡುವ ತಿಂಡಿ_ಊಟವನ್ನೇ ತಿಂದು, ಗ್ರಾಮ ಪಂಚಾಯತ್ ಅಥವಾ ಇನ್ಯಾವುದೋ ಕಟ್ಟಡದ ಮುಂದೆ ರಾತ್ರಿ ಕಳೆಯುತ್ತಿದ್ದರಂತೆ. ಹೀಗಾಗಿ ಆ ಭಾಗದ ಜನತೆಗೆ ಶಂಕರ್ ಅಂದ್ರೆ ತುಂಬಾ ಇಷ್ಟದ ವ್ಯಕ್ತಿಯಾಗಿದ್ರಂತೆ.
ರಸ್ತೆ ಬದಿಯಲ್ಲಿದ್ದ ಕೆಸರನ್ನೆಲ್ಲಾ ಮೈಗೊತ್ತಿಕೊಂಡು ಅಲೆದಾಡುತ್ತಿದ್ದ ಶಂಕರ್ ಗೆ ನೆಲ್ಯಾಡಿ ಹಾಗೂ ಕೊಕ್ಕಡ ಭಾಗದ ಜನ ಚಿಕಿತ್ಸೆಯನ್ನೂ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಂಕರ್ ನಿಧನರಾದ ಸುದ್ಧಿ ತಿಳಿದ ಪ್ರದೇಶದ ಜನ ಜಾತಿ-ಧರ್ಮದ ಎಲ್ಲೆ ಮೀರಿ ಆತನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ಸ್ಥಳೀಯ ಪೋಲೀಸರೂ ಶಂಕರ್ ನಿಧನಕ್ಕೆ ಗೌರವ ಸಲ್ಲಿಸಿದ್ದರು. ಬೈಕ್, ಆಟೋ, ಕಾರು ಸೇರಿದಂತೆ ನೂರಕ್ಕೂ ಮಿಕ್ಕಿದ ವಾಹನಗಳಲ್ಲಿ ಆತನ ಮೃತದೇಹದ ಮೆರವಣಿಗೆ ಮಾಡಿ, ಊರು ಕೇರಿ, ಜಾತಿ, ಧರ್ಮ ಯಾವುದೆಂದು ತಿಳಿಯದೆ ಎಲ್ಲರು ಶಂಕರ್ ಮೃತದೇಹಕ್ಕೆ ಅಶ್ರುತರ್ಪಣ ಸಲ್ಲಿಸಿದ್ದರು.