ಬಿಹಾರ : ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈ ನಡುವೆ ಎನ್ ಡಿ ಎ ಒಕ್ಕೂಟದಿಂದ ಹೊರ ಬಂದಿರುವ ಎಲ್ ಜೆಪಿ ಹಾಗೂ ಅದರ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಸ್ವತಂತ್ರವಾಗಿ ನಿಂತು ಚುನಾವಣೆ ಎದುರಿಸುತ್ತಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಪಾಸ್ವಾನ್, ಬಿಜೆಪಿ ನಾಯಕರ ಹೆಸರು ಬಳಸಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ ಎಂದು ಕಮಲ ನಾಯಕರು ಆರೋಪಿಸಿದ್ದರು. ಈ ಆರೋಪಕ್ಕೆ ಚಿರಾಗ್ ಪಾಸ್ವಾನ್ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಚಿರಾಗ್, ಮೋದಿ ಫೋಟೊ ಹಿಡಿದು ನಾನು ಚುನಾವಣಾ ಪ್ರಚಾರ ಎದುರಿಸಬೇಕಿಲ್ಲ. ನರೇಂದ್ರ ಮೋದಿಯವರು ನನ್ನ ಎದೆಯಲ್ಲಿಯಲ್ಲಿದ್ದಾರೆ. ನಾನು ಅವರ ಹನುಮ. ಬೇಕಾದರೆ, ನನ್ನ ಎದೆ ಬಗೆದು ತೋರಿಸುತ್ತೇನೆ. ನಾನು ನರೇಂದ್ರ ಮೋದಿ ಅವರ ಅಂಧ ಭಕ್ತ. ಆದರೆ, ಬಿಹಾರ ಸಿಎಂ ನಿತೀಶ್ ಕುಮಾರ್ ಮೋದಿ ಸೇರಿದಂತೆ ಬಿಜೆಪಿ ನಾಯಕರಿಗೆ ನನ್ನ ವಿರುದ್ಧ ಮಾತನಾಡುವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ, ಮೋದಿಯವರಿಗೆ ನಿಷ್ಠೆಯಿಂದ ಇದ್ದೇನೆ. ಮೋಸ ಮಾಡಿಲ್ಲ ಎಂದಿದ್ದಾರೆ.
ನಿತೀಶ್ ಕುಮಾರ್ ಅವರಿಗೆ ಪ್ರಧಾನಿ ಫೋಟೋ ಅವಶ್ಯಕತೆ ಇದೆ. ಕಾರಣ ಅವರಿಗೆ ಸೋಲುವ ಅಭದ್ರತೆ ಇದೆ. ಕೇಂದ್ರದ ಎನ್ಡಿಎ ಜೊತೆ ಮೈತ್ರಿ ಹೊಂದಿರುವ ಎಲ್ಜೆಪಿ, ಬಿಹಾರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆಗೆ ಇಳಿದಿದೆ. ಆದರೆ, ಜೆಡಿಯು ಮಾತ್ರ ರಾಜ್ಯದಲ್ಲಿ ಕೂಡ ಮೈತ್ರಿ ಮುಂದುವರೆಸಿ ಬಿಜೆಪಿಯೊಂದಿಗೆ ಚುನಾವಣೆ ಎದುರಿಸುತ್ತಿದೆ. ನ.10 ರ ಬಳಿಕ ಫಲಿತಾಂಶ ಬಂದ ಬಳಿಕ ನಾವು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸುತ್ತೇವೆ ಎಂದು ಮೈತ್ರಿ ಬಗ್ಗೆ ಮಾತನಾಡಿದ್ದಾರೆ.
ಕಳೆದ ವಾರ ಚಿರಾಗ್ ಪಾಸ್ವಾನ್ ತಂದೆ ರಾಮ್ ವಿಲಾಸ್ ಪಾಸ್ವಾನ್ ನಿಧನಹೊಂದಿದ್ದರು. ಇದೇ ವೇಳೆ ಅವರ ತಂದೆಗೆ ಸಂತಾಪ ವ್ಯಕ್ತಪಡಿಸಿದರು. ಇದೇ ವೇಳೆ ನಿತೀಶ್ ಕುಮಾರ್ ಅವರು ತಮ್ಮ ತಂದೆಯೇ ದ್ರೋಹ ಮಾಡಿದರು ಎಂದರು.