ಬೆಂಗಳೂರು: ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯ ಮತದಾನ ನಾಳೆ ನಡೆಯಲಿದೆ. ಪ್ರತಿಷ್ಟೆಯ ಅಖಾಡವಾಗಿರುವ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಿನ್ನೆಯಿಂದ ತೆರೆ ಬಿದ್ದಿದ್ದು ಇಂದು ಮನೆ ಮನೆ ಪ್ರಚಾರ ಮಾತ್ರ ನಡೆಸಬಹುದಾಗಿದೆ. ಕೊರೋನಾ ಸೋಂಕಿತರಿಗೂ ಮತದಾನದ ಅವಕಾಶ ನೀಡಿದ್ದು ಕರ್ತವ್ಯನಿರತ ಸಿಬ್ಬಂದಿಗೆ ತೊಂದರೆಯಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಮತದಾನ ಮಾಡಲು 678 ಮತಗಟ್ಟೆಯನ್ನು ಸಿದ್ಧಪಡಿಸಲಾಗಿದ್ದು, ಎಲ್ಲಾ ಮತಗಟ್ಟೆಯಲ್ಲಿ ಸ್ಯಾನಿಟೈಸರ್ ಮತ್ತು ದೇಹದ ಉಷ್ಣಾಂಶ ತಪಾಸಣೆ ನಡೆಸುವ ಯಂತ್ರವನ್ನು ಕಲ್ಪಿಸಲಾಗಿದೆ. ಪ್ರತಿಯೊಂದು ಮತಗಟ್ಟೆಗೆ ಒಬ್ಬ ಆರೋಗ್ಯಧಿಕಾರಿಯನ್ನ ನಿಯೋಜಿಸಲಾಗಿದೆ.
ಮತದಾರರಿಗೆ ಮತದಾನ ಮಾಡುವ ವೇಳೆ ಬಲಗೈಗೆ ಗ್ಲೌಸ್ ನೀಡಲಾಗುತ್ತದೆ. ಮತದಾನದ ವೇಳೆ ಗ್ಲೌಸ್ ಧರಿಸುವಿದು ಕಡ್ಡಾಯವಾಗಿದೆ. ಈ ಬಾರಿ ಮತದಾನ ಮಾಡುವ ವೇಳೆ ಬಲಗೈಗೆ ಗ್ಲೌಸ್ ಧರಿಸಿರುವುದರಿಂದ ಮತದಾನ ಮಾಡಿದ ವ್ಯಕ್ತಿಯ ಎಡಗೈಯ ಮಧ್ಯದ ಬೆರಳಿಗೆ ಶಾಯಿ ಹಾಕಲಾಗುವುದು ಎಂದು ಚುನಾವಣಾ ಅಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಕೊರೋನಾ ಸೋಂಕಿತರಿಗೆ ಮತದಾನ ಮಾಡಲು ಕೊನೆಯ ಒಂದು ಘಂಟೆ ಸಮಯ ನಿರ್ಧರಿಸಲಾಗಿದೆ. ಅಂದರೆ ಸಾಯಂಕಾಲ 5 ಘಂಟೆಯಿಂದ 6 ಘಂಟೆಯ ಸಮಯವನ್ನು ಕೊರೋನಾ ಸೋಂಕಿತರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಕೊರೋನಾ ಸೋಂಕಿತ ಮತದಾರರನ್ನು ಮತಗಟ್ಟೆಗೆ ಕರೆತರಲು ಸುಮಾರು 90 ಆ್ಯಂಬುಲೆನ್ಸ್ ಗಳ ವ್ಯವಸ್ಥೆ ಮಾಡಲಾಗಿದೆ. ಅಗತ್ಯಬಿದ್ದರೆ ಕೊರೋನಾ ಸೋಂಕಿತರು ಮತದಾನಕ್ಕೆ ಆಗಮಿಸುವ ವೇಳೆ ಮತಗಟ್ಟೆ ಸಿಬ್ಬಂದಿ ವರ್ಗಕ್ಕೆ ಪಿಪಿಇ ಕಿಟ್ ಗಳನ್ನು ಕೂಡಾ ಒದಗಿಸಲಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ 144 ಸೆಕ್ಷನ್ ಜಾರಿಮಾಡಲಾಗಿದೆ. ಮತದಾನ ನಡೆಯುವ ದಿನವಾದ ನ.3 ರಂದು ಮದ್ಯ ಮಾರಾಟವನ್ನು ನ.3 ರ ಮಧ್ಯರಾತ್ರಿ 12 ಘಂಟೆಯವರೆಗೆ ನಿಷೇಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂಥ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.