ಮೈಸೂರು: ಪ್ರಿ ವೆಡ್ಡಿಂಗ್ ಫೋಟೋ ಶೂಟ್ ವೇಳೆ ಕಾವೇರಿ ನದಿಯಲ್ಲಿ ತೆಪ್ಪ ಮುಳುಗಿ ವಧು-ವರ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಪ್ರಕರಣ ಸಂಬಂಧ ಪೊಲೀಸರು ಫೋಟೋ ಶೂಟ್ ನಲ್ಲಿ ಭಾಗವಹಿಸಿ ಮೃತಪಟ್ಟ ಚಂದ್ರ, ಶಶಿಕಲಾ, ಫೋಟೋಗ್ರಾಫರ್, ತೆಪ್ಪ ನೀಡಿದ ಕಟ್ಟೆಪುರ ನಿವಾಸಿ ಮೂಗಪ್ಪ ಸೇರಿ 6 ಜನರ ವಿರುದ್ಧ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಚಂದ್ರ ಹಾಗೂ ಶಶಿಕಲಾ ಅವರ ಮದುವೆ ನಡೆಯುವುದಿತ್ತು. ಹೀಗಾಗಿ ವಧು_ವರ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಫ್ಲ್ಯಾನ್ ಮಾಡಿದ್ದರು. ಇದಕ್ಕಾಗಿ ತಿ.ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮದ ಕಾವೇರಿ ಸಂಗಮದಲ್ಲಿ ಫೋಟೋಶೂಟ್ ಮಾಡಿಸುತ್ತಿದ್ದರು. ಈ ವೇಳೆ ತೆಪ್ಪ ಮುಳುಗಿ ವಧು-ವರ ಅಸುನೀಗಿದ್ದಾರೆ.
ತಲಕಾಡಿನ ಮುಡುಕುತೊರೆಯ ಕಾವೇರಿ ನದಿಯಲ್ಲಿ ತೆಪ್ಪದ ಮೇಲೆ ನಿಂತು ಫೋಟೋ ಶೂಟ್ ಮಾಡುತ್ತಿದ್ದಾಗ ಆಯತಪ್ಪಿ ಶಶಿಕಲಾ ನದಿಗೆ ಬಿದ್ದಿದ್ದಾರೆ. ಶಶಿಕಲಾಳನ್ನು ಹಿಡಿಯಲು ಹೋಗಿ ಚಂದ್ರು ಸಹ ನದಿಗೆ ಬಿದ್ದಿದ್ದಾರೆ. ಈಜು ಬಾರದ ಹಿನ್ನೆಲೆಯಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು 6 ಜನರ ಮೇಲೆ FIR ದಾಖಲಿಸಲಾಗಿದೆ.