ಬಿಹಾರದ ಫಲಿತಾಂಶ ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ಸದ್ಯದ ಮತ ಎಣಿಕೆ ವರದಿಗಳ ಪ್ರಕಾರ ಎನ್ಡಿಎ 127 ಕ್ಷೇತ್ರಗಳಲ್ಲಿ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದೆ. ಮಹಾಘಟಬಂಧನ್ 103 ಕ್ಕೆ ಕುಸಿದಿದೆ. ಇಂದು ಬೆಳಿಗ್ಗೆ 9:30 ರವರೆಗೂ ಮಹಾಘಟಬಂಧನ್ 125 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ತದನಂತರ ಎನ್ಡಿಎ ಮುನ್ನಡೆ ಸಾಧಿಸುತ್ತಿದ್ದು ಅಧಿಕಾರದತ್ತ ಮುನ್ನುಗ್ಗುತ್ತಿದೆ.
ಬಿಜೆಪಿಯು ಕಳೆದ ಚುನಾವಣೆಗಿಂತ ಈ ಬಾರಿ 21ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜೆಡಿಯು 20 ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಆದರೂ ಎನ್ಡಿಎ ಕಳೆದ ಬಾರಿಗಿಂತ 07 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸ್ಪಷ್ಟ ಸರಳ ಬಹುಮತ ಪಡೆಯುವ ನಿರೀಕ್ಷೆಯಲ್ಲಿದೆ.
ಮಹಾಘಟಬಂಧನ್ನಲ್ಲಿ ಆರ್ಜೆಡಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಹಿನ್ನಡೆ ಅನುಭವಿಸಿದರೆ ಎಡಪಕ್ಷಗಳು ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಕಳೆದ ಬಾರಿಗಿಂತ ಆರ್ಜೆಡಿ 21 ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಅದೇ ರೀತಿಯಲ್ಲಿ ಕಾಂಗ್ರೆಸ್ 7 ಸ್ಥಾನಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಮಹಾಘಟಬಂಧನ್ ನ ಭಾಗವಾದ ಎಡಪಕ್ಷಗಳು 20 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಸಿಪಿಐ(ಎಂಎಲ್) 14 ಸ್ಥಾನಗಳಲ್ಲಿ, ಸಿಪಿಐ 03 ಮತ್ತು ಸಿಪಿಐ(ಎಂ) 03 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಮತ ಎಣಿಕೆಯ ಫಲಿತಾಂಶವನ್ನು ನೋಡುತ್ತಿದ್ದರೆ ಮತ್ತೊಮ್ಮೆ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗುವುದು ಖಾತರಿಯಾಗುತ್ತಿದೆ. ಬಿಹಾರದ ಕಿರಿಯ ಮುಖ್ಯಮಂತ್ರಿಯಾಗುತ್ತೇನೆಂದು ಕನಸು ಕಂಡಿದ್ದ ತೇಜಸ್ವಿ ಯಾದವ್ ಕನಸು ಭಗ್ನವಾಗುತ್ತಿರುವಂತೆ ಕಾಣುತ್ತಿದೆ.