ಬಿಹಾರ: ಬಿಹಾರದಲ್ಲಿ ನಿತೀಶ್ ಸರ್ಕಾರ ರಚನೆಯಾಗಿ ಒಂದು ವಾರ ಕಳೆಯುವುದರೊಳಗಾಗಿ ಮೊದಲ ವಿಕೆಟ್ ಪತನಗೊಂಡಿದೆ. ಎನ್ ಡಿ ಎ ಮೈತ್ರಿಕೂಟ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತ್ರ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇವರ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಮೇವಾಲಾಲ್ ಚೌಧರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇನ್ನು ಆರ್ ಜೆಡಿ ಆರೋಪದ ಬೆನ್ನಲ್ಲೇ ನಿತೀಶ್ ಕುಮಾರ್ ಅವರು ನವೆಂಬರ್ 16ರಂದು ಶಿಕ್ಷಣ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮೇವಾಲಾಲ್ ವಿರುದ್ಧ ಇರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಚರ್ಚಿಸಿದ್ದರು.
2017ರಲ್ಲಿ ಭಗಲ್ ಪುರ್ ಸಬುರ್ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಭಾರಿ ಹಗರಣಗಳನ್ನು ಮಾಡಿರುವ ಆರೋಪವಿದೆ. ವಿಶ್ವವಿದ್ಯಾಲಯದ 161 ಸಹಾಯಕ ಪ್ರಾಧ್ಯಾಪಕರ ಅಕ್ರಮ ನೇಮಕ ಮತ್ತು ಕಿರಿಯ ವಿಜ್ಞಾನಿಗಳಿಂದ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಮೇವಾಲಾಲ್ ಚೌಧರಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿತ್ತು. ಸಹಾಯಕ ಪ್ರಾಧ್ಯಾಪಕರ ಅಕ್ರಮ ನೇಮಕಾತಿಯಷ್ಟೇ ಅಲ್ಲದೇ ಸಬೌರ್ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲೂ ಅಕ್ರಮ ಎಸಗಿರುವ ಬಗ್ಗೆ ಮೇವಾಲಾಲ್ ಚೌಧರಿ ವಿರುದ್ಧ ಆರೋಪಿಸಲಾಗಿದೆ.
ನಿತೀಶ್ ಕುಮಾರ್ ಜೊತೆ ಬಿಜೆಪಿಯ ಕುಮಾರ್ ತಾರ್ ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ, ಜೆಡಿಯುನ ವಿಜಯ್ ಕುಮಾರ್ ಚೌಧರಿ, ಅಶೋಕ್ ಕುಮಾರ್ ಚೌಧರಿ, ವಿಜೇಂದ್ರ ಪ್ರಸಾದ್ ಯಾದವ್, ಮೇವಾ ಲಾಲ್ ಚೌಧರಿ, ಶೀಲಾ ಮಂಡಲ್ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.