ಅಮೇರಿಕಾ: ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಅವರ ಜಯವನ್ನು ಅಮೆರಿಕದ ಎಲೆಕ್ಟೊರಲ್ ಕಾಲೇಜ್ ಸಭೆ ದೃಢಪಡಿಸಿದ್ದು ಬೈಡನ್ ಅವರನ್ನು ಅಮೇರಿಕಾದ ನೂತನ ಅಧ್ಯಕ್ಷ ಎಂದು ಅಧಿಕೃತವಾಗಿ ಘೋಷಿಸಿದೆ.
ಕ್ಯಾಲಿಫೋರ್ನಿಯಾದ 55 ಎಲೆಕ್ಟೊರಲ್ ಮತಗಳು ಬೈಡೆನ್ ಅವರ ಜಯವನ್ನು ಖಾತ್ರಿಪಡಿಸಿದ್ದು, 270ಕ್ಕಿಂತ ಅಧಿಕ ಮತಗಳು ಬೈಡೆನ್ಗೆ ಸಿಕ್ಕಿದಂತಾಗಿದೆ. ಎಲ್ಲ ಮತದಾನ ಮುಗಿದಾಗ ಬೈಡೆನ್ 306 ಹಾಗೂ ಟ್ರಂಪ್ 232 ಮತ ಪಡೆಯಲಿದ್ದಾರೆ.
ಇನ್ನು ಹವಾಯಿಯಲ್ಲಿ ಮತದಾನ ಇನ್ನಷ್ಟೇ ನಡೆಯಬೇಕಾಗಿದೆ. ಕೊರೋನ ಕಾರಣದಿಂದ ನೆವಾಡಾದಲ್ಲಿ ಎಲೆಕ್ಟೊರಲ್ ಮತದಾರರು ಝೂಮ್ ಮೂಲಕ ಸಭೆ ಸೇರಿದರು. ಯುದ್ಧರಂಗದ ರಾಜ್ಯಗಳು ಎಂದೇ ಕರೆಸಿಕೊಂಡಿದ್ದ ಅರಿಜೋನಾ, ಜಾರ್ಜಿಯಾ, ಮಿಚಿಗನ್, ನೆವಾಡ, ಪೆನ್ಸೆಲ್ವೇನಿಯಾ ಮತ್ತು ವಿಸ್ಕೊನ್ಸಿನ್ಗಳಲ್ಲಿ ಬೈಡೆನ್ ಅವರಿಗೆ ಮತಗಳು ಚಲಾವಣೆಯಾದವು.
ಮತಗಳಿಕೆ ಮತ್ತು ಎಲೆಕ್ಟೊರಲ್ ಸ್ಥಾನಗಳಿಕೆಯಲ್ಲಿ ಸೋತರೂ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ವಾದಿಸುತ್ತಾ, ಚುನಾವಣೆ ಫಲಿತಾಂಶವನ್ನೇ ತಡೆಯಲು ಕಾನೂನು ಹೋರಾಟವನ್ನು ಆರಂಭಿಸಿದ್ದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೋರಾಟಕ್ಕೆ ಈ ಬೆಳಗವಣಿಗೆಯು ಅಂತ್ಯ ಹಾಡಿದೆ.ಇದೀಗ ಜೋ ಬೈಡನ್ ಜನವರಿ 20 ರಂದು ಅಮೆರಿಕದ 46 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.