ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಉಂಟಾಗಿರುವ ಬುರೇವಿ ಚಂಡಮಾರುತದ ಪ್ರಭಾವ ರಾಜ್ಯದ ಮೇಲೂ ಅಪ್ಪಳಿಸಲಿದ್ದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಭಾರತದ ಕರಾವಳಿ ತೀರಕ್ಕೆ ಅಪ್ಪಳಿಸಲಿರುವ ಬುರೇವಿ ಚಂಡಮಾರುತದ ಪರಿಣಾಮದಿಂದ ನಿನ್ನೆಯಿಂದ ಬೆಂಗಳೂರಿನಲ್ಲಿ ಮಳೆ ಶುರುವಾಗಿದೆ. ಇಂದು ಕೂಡ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಇಂದು ಬೆಳಗ್ಗೆ ಬುರೇವಿ ಚಂಡಮಾರುತ ತಮಿಳುನಾಡಿನ ಕರಾವಳಿ ಪ್ರದೇಶವನ್ನು ಹಾದು ಹೋಗಲಿದೆ. ಬಳಿಕ ಕೇರಳದಲ್ಲೂ ಚಂಡಮಾರುತ ಅಪ್ಪಳಿಸಲಿದ್ದು, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತಮಿಳುನಾಡು ಮತ್ತು ಕೇರಳದ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಮೇಲೂ ಬುರೇವಿ ಚಂಡಮಾರುತದ ಪ್ರಭಾವ ಉಂಟಾಗಲಿದೆ.
ಹೀಗಾಗಿ ಕರ್ನಾಟಕದ ಬೆಂಗಳೂರು ನಗರ, ಗ್ರಾಮಾಂತರ, ಉಡುಪಿ, ತುಮಕೂರು, ಮೈಸೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ,ಕೋಲಾರ, ಕೊಡಗು, ರಾಮನಗರ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.