ಮೈಸೂರು: ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿನಯದ ಸಿಂಹಾದ್ರಿಯ ಸಿಂಹ ಸಿನಿಮಾ ನೆನಪಿರಬಹುದು. ಅದರಲ್ಲಿ ಚುನಾವಣೆ ಅಂತ ಬಂದಾಗ ವಿಷ್ಣುವರ್ಧನ್ ಭಿಕ್ಷುಕನನ್ನೇ ನಿಲ್ಲಿಸಿ ಗೆಲ್ಲಿಸುತ್ತಾರೆ. ಅದೇ ರೀತಿ ಸಿನಿಮಾದಲ್ಲಿ ಆದಂತೆ ಇಲ್ಲೊಂದು ಘಟನೆ ಕೂಡ ನಡೆದಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ 40 ವರ್ಷದ ಅಂಕ ನಾಯಕನನ್ನು ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಗೆ ನಿಲ್ಲಿಸಿದ್ದಾರೆ. ಈ ಹಿಂದೆ ಆಯ್ಕೆಯಾದವರು ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ತಾಲ್ಲೂಕಿನ ಬೊಕ್ಕಹಳ್ಳಿ ಯುವಕರು, ಗ್ರಾಮದ ಭಿಕ್ಷುಕರೊಬ್ಬರನ್ನು ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲಿಸಿದ್ದಾರೆ.
ಹುಳಿಮಾವು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಬೊಕ್ಕಹಳ್ಳಿ ಗ್ರಾಮದಲ್ಲಿ ನಾಮಪತ್ರ ಸಲ್ಲಿಸಿರುವ ಭಿಕ್ಷುಕ. ಗ್ರಾಮದ ಕೆಲ ಯುವಕರು, ಈ ವ್ಯಕ್ತಿಗೆ ಹೊಸ ಬಟ್ಟೆ ತೊಡಿಸಿ, ಕನ್ನಡಕ ಹಾಕಿಸಿ, ಕಾರಿನಲ್ಲಿ ಕರೆದೊಯ್ದು ಉಮೇದುವಾರಿಕೆ ಸಲ್ಲಿಸಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಾನ ಇದಾಗಿದ್ದು, ಕ್ಯಾಮೆರಾ ಚಿಹ್ನೆ ಲಭಿಸಿದೆ. ಅಂಕ ನಾಯಕ ಅಂಗವಿಕಲರಾಗಿದ್ದು, ಗ್ರಾಮದಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆಗಾಗ್ಗೆ ಊರಿನವರು ಊಟ, ಹಣ ಕೊಡುತ್ತಿರುತ್ತಾರೆ. ಸುತ್ತಮುತ್ತಲಿನ ಹೋಟೆಲ್ ಹಾಗೂ ಕೆಲ ಮನೆಗಳಿಗೆ ತೆರಳಿ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಿರುತ್ತಾರೆ.
ದೇಶದ ಪ್ರಜೆಯಾಗಿದ್ದರೆ ಸಾಕು. ಯಾರಾದರೇನು ಜನಸೇವೆ ಮಾಡಲು ಹೀಗಾಗಿ ಈತನನ್ನೆ ಕಣಕ್ಕೆ ನಿಲ್ಲಿಸಿದ್ದೇವೆ ಎನ್ನುತ್ತಾರೆ ಇಲ್ಲಿನ ಯುವಕರು. ಈತ ಸ್ವತಃ ಕಷ್ಟಗಳನ್ನು ಅನುಭವಿಸಿದ್ದಾನೆ. ಆತನ ಆ ಅರಿವು ಚುನಾವಣೆಯಲ್ಲಿ ಗೆದ್ದ ಮೇಲೆ ಕೆಲಸ ಮಾಡಲಿದೆ ಎಂಬ ಅಭಿಲಾಷೆ ನಮ್ಮದು ಎನ್ನುತ್ತಿದ್ದಾರೆ ಇಲ್ಲಿನ ಯುವಕರು.