ನವದೆಹಲಿ : ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ನ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮುಂದಿನ ವರ್ಷ ಮಾರ್ಚ್ 31 ರ ಒಳಗಾಗಿ ಎಲ್ಲಾ ಬ್ಯಾಂಕ್ ಖಾತೆಗಳು ಆಧಾರ್ ಜೊತೆ ಲಿಂಕ್ ಆಗಿರಲೇಬೇಕು ಎಂದು ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಬ್ಯಾಂಕ್ಗಳು ಡಿಜಿಟಲ್ ಪಾವತಿಯ ಬಳಕೆಗೆ ಗ್ರಾಹಕರನ್ನು ಉತ್ತೇಜಿಸಬೇಕು. ಯುಪಿಐ ಚಾಲಿತ ಪಾವತಿ ವ್ಯವಸ್ಥೆಯೂ ಈಗಾಗಲೇ ಸಾಕಷ್ಟು ಬಳಕೆಯಲ್ಲಿದೆ. ಇದು ನಮ್ಮೆಲ್ಲ ಬ್ಯಾಂಕುಗಳ ಸಾಮಾನ್ಯ ವ್ಯವಹಾರ ವೇದಿಕೆಯಾಗಬೇಕು. ಬ್ಯಾಂಕುಗಳು ರುಪೇ ಕಾರ್ಡ್ಗಳನ್ನು ಮಾತ್ರವೇ ಉತ್ತೇಜಿಸಬೇಕು ಎಂದು ಅವರು ಹೇಳಿದರು.
ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡದ್ದಿರುವುದರಿಂದಾಗಿಯೇ ಹಣಕಾಸು ವರ್ಗಾವಣೆಯಲ್ಲಿಯೂ ಕೆಲ ತೊಂದರೆ ಉಂಟಾಗುತ್ತಿವೆ. ಆಧಾರ್ ಜೊತೆ ಲಿಂಕ್ ಮಾಡದ ಅನೇಕ ಖಾತೆಗಳಿವೆ ಆದ್ದರಿಂದ ಮೊದಲು ಆಧಾರ್ ಲಿಂಕ್ ಮಾಡಿಸಿ ಮತ್ತು ಅಗತ್ಯವಿರುವ ಖಾತೆಗಳಿಗೆ ಪ್ಯಾನ್ ಕಾರ್ಡ್ ಕೂಡಾ ಲಿಂಕ್ ಮಾಡಿಸಿ ಎಂದು ಸೂಚನೆ ನೀಡಿದ್ದಾರೆ.
ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡಿದ್ದು ಹೀಗಾಗಿ ಮಾರ್ಚ್.31, 2021ರೊಳಗೆ ಎಲ್ಲಾ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆಯಾಗಿದೆಯೇ ಎಂಬುದನ್ನು ಖಾತರಿ ಮಾಡಿಕೊಳ್ಳಿ ಎಂದು ಅವರು ಬ್ಯಾಂಕ್ ಗಳಿಗೆ ಸೂಚಿಸಿದ್ದಾರೆ.