ದುಬೈ: ಸದ್ಯ ಕೊರೊನಾ ಎಂಬ ಮಹಾಮಾರಿ ಎಲ್ಲರಿಗೂ ಭಯ ಹುಟ್ಟಿಸಿದೆ. ಯಾವಾಗ ಕೊರೊನಾ ಮುಕ್ತ ದೇಶವಾಗುತ್ತೆ ಅಂತ ಎಲ್ಲಾ ದೇಶದವರು ಕಾಯುತ್ತಿದ್ದಾರೆ. ಕೊರೊನಾ ತಡೆಗೆ ಮಾಸ್ಕ್ ಕೂಡ ಒಂದು ಪರಿಹಾರ ಅಂತ ಎಲ್ಲಾ ಕಡೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದ್ದು, ಮುಂದೆ ಒಳ್ಳೆಯ ದಿನಗಳನ್ನು ನಿರೀಕ್ಷಿಸಬಹುದು ಎಂಬ ಕಮೆಂಟ್ ಗಳು ಹರಿದಾಡುತ್ತಿವೆ.
ಈ ವರ್ಷದ ಆರಂಭದಿಂದ ಇಲ್ಲಿಯವರೆಗೂ ಪ್ರಪಂಚವನ್ನು ಕಾಡುತ್ತಿರುವ ಕೊರೋನಾ ವೈರಸ್ಗೆ ಹಲವಾರು ಜನ ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಲಸಿಕೆ ಇಲ್ಲದ ಕಾರಣ ಹಲವು ರಾಷ್ಟ್ರಗಳು ರಕ್ಷಣಾತ್ಮಕ ಕಾರ್ಯ ಮೂಲಕ ಸೋಂಕು ಹರಡುವುದನ್ನು ತಡೆಯಲು ಮುಂದಾಗಿದ್ದಾರೆ. ಇದಕ್ಕಾಗಿ ಮಾಸ್ಕ್ ಬಳಕೆ ಕಡ್ಡಾಯವನ್ನಾಗಿ ಮಾಡಲಾಗಿದೆ. ಈ ಹಿಂದೆ ಸೀಮಿತವಾಗಿದ್ದ ಈ ಮಾಸ್ಕ್ ಬಳಕೆ ಈಗ ಪ್ರತಿಯೊಬ್ಬರು ಕಡ್ಡಾಯವಾಗಿ ಧರಿಸಲೇಬೇಕಾಗಿದೆ.
ಹುಟ್ಟಿದ ಮಗುವೊಂದು ವೈದ್ಯರ ಮಾಸ್ಕ್ ಎಳೆದಿದೆ. ಈ ಮಾಸ್ಕ್ ಅನ್ನು ಮಗುವು ಎಳೆದಿರುವುದನ್ನು ಗಮನಿಸಿದರೆ, ಈ ಸೋಂಕಿನಿಂದ ಶೀಘ್ರವಾಗಿಯೇ ಪರಿಹಾರ ಸಿಗಲಿದೆ ಎಂಬುದು ಜನರ ವಾದವಾಗಿದೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ದುಬೈನ ಸ್ತ್ರೀರೋಗ ತಜ್ಞರಾದ ಸಮೀರ್ ಚೀಬ್ ಎಂಬುವವರು ಈ ಫೋಟೊವನ್ನು ಹಂಚಿಕೊಂಡಿದ್ದು, ಜನರು ಮಾಸ್ಕ್ನಿಂದ ಮುಕ್ತಿ ಪಡೆಯುವ ಕಾಲ ಬೇಗದಲ್ಲಿಯೇ ಬರಲಿದೆ ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಸದ್ಯ ಎಲ್ಲರ ಮೆಚ್ಚುಗೆಯನ್ನು ಪಡೆಯುತ್ತಿದ್ದು, ಜನರು ಕೂಡ ಇದು ಒಳ್ಳೆಯ ದಿನದ ಆಗಮನದ ಲಕ್ಷಣ ಎಂದಿದ್ದಾರೆ.