ಬೆಂಗಳೂರು: ಎಟಿಎಂಗೆ ಹಣ ತುಂಬುತ್ತೇನೆಂದು ಹೋಗಿ ಎಟಿಎಂನಲ್ಲಿದ್ದ ಹಣವನ್ನೇ ಎಸ್ಕೇಪ್ ಮಾಡಿ, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ವಿನಯ್ ಜೋಗಿ ಬಂಧಿತ ಆರೋಪಿ.
ವಿನಯ್ ಜೋಗಿ ಸೆಕ್ಯೂರ್ ಖಾಸಗಿ ಕಂಪನಿಯಲ್ಲಿ ಎಟಿಎಂಗಳಿಗೆ ಹಣ ತುಂಬುವ ಕೆಲಸ ಮಾಡುತ್ತಿದ್ದ. ಹಣ ತುಂಬಲು ಮಾಗ್ನೆಟಿಕ್ ಕೀ ಈತನಿಗೆ ನೀಡಲಾಗಿತ್ತು. ಎಟಿಎಂನಲ್ಲಿ ಹಣ ಹಾಕುವ ಕೆಲಸ ಶಿಸ್ತು ಬದ್ಧವಾಗಿ ಮಾಡುತ್ತಿದ್ದ ವಿನಯ್, ರಜೆ ದಿನಗಳಲ್ಲಿ ಎಟಿಎಂಗಳಿಗೆ ಹೋಗಿ ಮ್ಯಾಗ್ನೆಟಿಕ್ ಕೀ ಬಳಿಸಿ ಚಿಕ್ಕ ಪುಟ್ಟ ಹಣ ತೆಗೆದು ಸುಮ್ಮನಾಗುತ್ತಿದ್ದ.
ಖತರ್ ನಾಕ್ ಐಡಿಯಾ ಬಳಸಿ ಬರೋಬ್ಬರಿ 40 ಕ್ಕೂ ಹೆಚ್ಚು ಎಟಿಎಂಗಳಲ್ಲಿ ಗೊತ್ತಿಲ್ಲದೇ ಹಣ ಲೂಟಿ ಮಾಡಿದ್ದಾನೆ. ಬ್ಯಾಂಕ್ಗಳ ಗಮನಕ್ಕೆ ಬಾರದಂತೆ ಎಟಿಎಂಗಳಲ್ಲಿ 60 ಲಕ್ಷ ರೂ ದೋಚಿದ್ದಾನೆ. ತಾವರೆಕೆರೆ, ಬ್ಯಾಡರಹಳ್ಳಿ, ಗೊಲ್ಲರಹಟ್ಟಿ, ಕೆಂಗೇರಿ ಸುತ್ತಮುತ್ತ ಬ್ಯಾಂಕ್ಗಳಲ್ಲಿ ತನ್ನ ಕೈಚಳಕ ತೋರುತ್ತಿದ್ದ. ಸಿಸಿಟಿವಿ ಕ್ಯಾಮರಾ ಕಣ್ಣಿಗೆ ಕಾಣದಂತೆ ಅವುಗಳಿಗೆ ಅಡ್ಡ ಮಾಡ್ತಿದ್ದ. ಒಂದೇ ಸಲ ಲಕ್ಷಾಂತರ ಲೂಟಿ ಮಾಡುವ ಯೋಜನೆ ರೂಪಿಸಿದ ವಿನಯ್ ಜೋಗಿ ಗೊಲ್ಲರಹಟ್ಟಿಯಲ್ಲಿರುವ ಕೆನರಾ ಬ್ಯಾಂಕ್ ಸೇರಿದಂತೆ ನಾಲ್ಕು ಕಡೆ ಬರೋಬ್ಬರಿ 36 ಲಕ್ಷ ರೂಪಾಯಿ ದೋಚಿದ್ದ.
ಬ್ಯಾಂಕ್ನವರಿಗೆ ಅನುಮಾನ ಬಂದು ಸೆಕ್ಯೂರ್ ವಾಲ್ಯೂ ಕಂಪನಿ ಗಮನಕ್ಕೆ ತಂದಿದ್ದರು. ಇದೇ ವೇಳೆ ವಿನಯ್ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ ನಾಟಕ ಶುರು ಮಾಡಿದ್ದ. ಕೆಲಸ ಮಾಡುತ್ತಿದ್ದ ಕಂಪನಿ ಮ್ಯಾನೇಜರ್ಗಳ ಮೇಲೆ ಕಿರುಕುಳ ಆರೋಪ ಹೊರಿಸಿ ನಾಟಕ ಮಾಡಿದ್ದ. ಇದೀಗ ಆತನ ನಾಟಕ ಬಂದ್ ಆಗಿದ್ದು, ಪೊಲೀಸರ ಬಲೆಗೆ ಬಿದ್ದಿದ್ದಾನೆ.