ತಿರುವನಂತಪುರಂ: ರಾಜ್ಯ ಹಾಗೂ ದೇಶದ ಅತ್ಯಂತ ಕಿರಿಯ ಮೇಯರ್ ಆಗಿ ಆರ್ಯ ರಾಜೇಂದ್ರನ್ ಆಯ್ಕೆಯಾಗಿದ್ದಾರೆ. ತಿರುವನಂತಪುರಂ ಮಹಾನಗರ ಪಾಲಿಕೆಯನ್ನು ಮುನ್ನಡೆಸುವ ಮೇಯರ್ ಸ್ಥಾನಕ್ಕೆ ಸಿಪಿಎಂ ಪಕ್ಷ 21 ವರ್ಷದ ಆರ್ಯ ರಾಜೇಂದ್ರನ್ ಅವರನ್ನು ಆಯ್ಕೆ ಮಾಡುವ ಮೂಲಕ ದೇಶದಲ್ಲೇ ಯುವ ಮೇಯರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಿಪಿಎಂ ಅಭ್ಯರ್ಥಿ ಆರ್ಯ, ಮುದವನ್ಮುಗಲ್ ವಾರ್ಡ್ನಿಂದ ಯುಡಿಎಫ್ ಅಭ್ಯರ್ಥಿ ಶ್ರೀಕಾಲ ಅವರ ವಿರುದ್ಧ 2872 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಆರ್ಯ ಅವರು ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿಲ್ಲ. ಮಧ್ಯಮ ವರ್ಗದಲ್ಲಿ ಬೆಳೆದಿರುವ ಆರ್ಯ ಅವರ ತಂದೆ ಎಲೆಕ್ಟ್ರಿಷಿಯನ್ ಆಗಿದ್ದು, ತಾಯಿ ಎಲ್ಐಸಿ ಏಜೆಂಟ್ ಆಗಿದ್ದಾರೆ. ಆರ್ಯ ಆಲ್ ಸೈಂಟ್ಸ್ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದಾರೆ. ಅಲ್ಲದೆ ಬಾಲ ಸಂಘದ ರಾಜ್ಯಾಧ್ಯಕ್ಷೆ ಹಾಗೂ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾದ ರಾಜ್ಯ ಸಮಿತಿಯ ಸದಸ್ಯೆಯಾಗಿದ್ದಾರೆ.
ಪಕ್ಷ ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಆರ್ಯ ಹೇಳಿದ್ದಾರೆ. ಕಳೆದ ಸ್ವಲ್ಪ ದಿನಗಳ ಹಿಂದಷ್ಟೇ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ನಿರ್ಧಾರ ತಿಳಿಸಿದ್ದರು. ಇದೀಗ ಅಂತಿಮವಾಗಿದ್ದು, ಆರ್ಯ ರಾಜೇಂದ್ರನ್ ಅವರನ್ನು ತಿರುವನಂತಪುರಂ ಮೇಯರ್ ಆಗಿ ಆಯ್ಕೆ ಮಾಡಲಾಗಿದೆ.