ಮಂಗಳೂರು : ಕೊರೊನಾ ಸಂಕಷ್ಟದ ನಡುವೆ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಜೊತೆಗೆ ಎಲ್ಲೆಡೆ ನವರಾತ್ರಿ ಸಂಭ್ರಮವನ್ನು ಸರಳವಾಗಿ, ಸಂಪ್ರದಾಯಿಕವಾಗಿ ಆಚರಿಸಲಾಯಿತು. ಈ ಮಧ್ಯೆ ನವದುರ್ಗೆಯರ ವಿಚಾರವಾಗಿ ಅನೇಕ ಆನ್ ಲೈನ್ ಸ್ಪರ್ಧೆಗಳು ನಡೆದಿವೆ. ಸರಸ್ವತಿ ಫೋಟೋಶೂಟ್ ಮಾಡಿಸಿದ್ದ ಯುವತಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾರದೆ ಫೋಟೋಶೂಟ್ ಗಾಗಿ ಆಯ್ಕೆಯಾದವರಲ್ಲಿ ಮಂಗಳೂರಿನ ಅನಿಷಾ ಏಂಜಲೀನಾ ಮಾಂಟೆರೊ ಎಂಬ ರೂಪದರ್ಶಿ ಕೂಡ ಒಬ್ಬರು. ಅನಿಷಾ ಏಂಜಲೀನಾ ಮಾಂಟೆರೊ ಯಾವುದೇ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟಾಗದಂತೆ, ವೃತಾಚರಿಸಿ ಶಾರದೆ ಫೋಟೋಶೂಟ್ ಮಾಡಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವು ಮಂದಿಯ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಈ ಕ್ರಿಶ್ಚಿಯನ್ ಯುವತಿಯೊಬ್ಬರು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಬಾರದಂತೆ 21 ದಿನಗಳ ಕಾಲ ಉಪವಾಸ ಆಚರಿಸಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನಿಷಾ ಏಂಜಲೀನಾ ಮಾಂಟೆರೊ, ನನ್ನನ್ನು ದೇವಿ ಶಾರದಾ ಫೋಟೋಶೂಟ್ಗಾಗಿ ಆಯ್ಕೆ ಮಾಡಲಾಯಿತು. ಧಾರ್ಮಿಕ ಸಂಪ್ರದಾಯವನ್ನು ಗೌರವಿಸಿ ಅದಕ್ಕೆ ಧಕ್ಕೆ ಬಾರದಂತೆ 21 ದಿನಗಳ ಕಾಲ ಉಪವಾಸ ಮಾಡಲು ನಿರ್ಧರಿಸಿದೆ. ಜನರ ಪ್ರೋತ್ಸಾಹಕ್ಕಾಗಿ ನಾನು ಅವರಿಗೆ ಕೃತಜ್ಞಳಾಗಿದ್ದೇನೆ ಎಂದು ಹೇಳಿದ್ದಾರೆ.