ಬೆಂಗಳೂರು: ಸಾರಿಗೆ ನೌಕರರಿಗೆ ಮುಷ್ಕರ ವಾಪಸ್ ಪಡೆದುಕೊಳ್ಳಿ ಎಂದು ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ಮನವಿ ಮಾಡಿದ್ದಾರೆ.
ಸಾರಿಗೆ ಸಚಿವರು ನಡೆಸಿದ ಯೂನಿಯನ್ ಮುಖಂಡರ ಜೊತೆಗಿನ ಸಭೆಯ ನಂತರ ಮಾತನಾಡಿದ ಅವರು, ಸಾರಿಗೆ ನೌಕರರ ಮುಷ್ಕರ ವಿಫಲಗೊಳಿಸುವ ಉದ್ದೇಶವಿಲ್ಲ. ನಾವು ಸಾರಿಗೆ ನಿಗಮ, ನೌಕರರ ಪರವಾಗಿಯೇ ಇದ್ದೇವೆ. ಆಂಧ್ರದಲ್ಲಿ ಸಾರಿಗೆ ನಿಗಮದ ನೌಕರರನ್ನ ಸರ್ಕಾರಿ ನೌಕರರಾಗಿ ಮಾಡಿದ್ದಾರೆ. ಹಾಗೆಯೇ, ನಮ್ಮಲ್ಲಿ ಸಹ ಹಾಗೆ ಮಾಡಬೇಕು ಎಂದು ಸಲಹೆ ಮಾಡಿದರು. ಮಾತುಕತೆ ಮೂಲಕವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣ. ಸ್ಟ್ರೈಕ್ ಮಾಡಿದರೆ ಏನಾಗುತ್ತೆಂದು ನೋಡಿದ್ದೀರಿ. ಕೆಲವು ಬಾರಿ ಹೈಜಾಕರ್ಸ್ ಬಂದು ಬಿಡ್ತಾರೆ ಏನೂ ಮಾತನಾಡೋಕಾಗಲ್ಲ ಎಂದರು.
ಅಲ್ಲದೇ ಸಾರಿಗೆ ನೌಕರರು ದಿಢೀರ್ ಪ್ರತಿಭಟನೆ ಮಾಡಿದ್ದಾರೆ. ಇದಕ್ಕೆ ರೈತ ಮುಖಂಡರು ಬೆಂಬಲ ನೀಡಿದ್ದಾರೆ. ಸಾರ್ವಜನಿಕರು ತಾವಾಗಿಯೇ ಹೋರಾಟ ಪ್ರಾರಂಭಿಸಿಲ್ಲ. ಕೋಡಿಹಳ್ಳಿ ಯಾವತ್ತೂ ಸಾರಿಗೆ ಇಲಾಖೆಯನ್ನು ಲೀಡ್ ಮಾಡಿಲ್ಲ ಎಂದು ಹೇಳಿದ್ದಾರೆ.
ಮುಷ್ಕರಕ್ಕೆ ಕರೆ ಕೊಟ್ಟವರನ್ನು ಕರೆದು ಚರ್ಚಿಸಿ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿಯವರಿಗೆ ತಿಳಿಸಿದ್ದೇವೆ. ಮಾತನಾಡುವುದಾಗಿ ಲಕ್ಷ್ಮಣ ಸವದಿಯವರು ಹೇಳಿದ್ದಾರೆ. ಹೀಗಾಗಿ, ಮುಷ್ಕರ ವಾಪಸ್ ಪಡೆಯಲು ಮನವಿ ಮಾಡ್ತೇವೆ. ಆದರೆ, ಇದೇ ಮೊದಲ ಮುಷ್ಕರವಲ್ಲ, ಇದೇ ಕೊನೆಯಾಗಲ್ಲ. ಜನರಿಗೆ ತೊಂದರೆ ಕೊಡದೆ ಮುಷ್ಕರ ವಾಪಸ್ ಪಡೆಯಿರಿ ಎಂದು ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ಸಾರಿಗೆ ನೌಕರರಿಗೆ ಮನವಿ ಮಾಡಿದರು.
ಆಂಧ್ರಪ್ರದೇಶದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿಸಿಕೊಂಡು ಒಂದು ವರ್ಷ ಆಗಿದೆ. ಇದನ್ನು ಅಧ್ಯಯನ ಮಾಡಲು ಸಮಯ ಕೊಡಿ. ಸಾರಿಗೆ ನೌಕರರು ಇದರಿಂದ ಲಾಭ ಏನು ಎಂದೂ ಸಹ ಹೇಳಿಲ್ಲ. ಸರ್ಕಾರ ಹಿಂದೆ ಸರಿದರೆ ನಾವು ನಿಮ್ಮ ಜೊತೆ ನಿಂತುಕೊಳ್ಳುತ್ತೇವೆ ಎಂದು ಅನಂತ ಸುಬ್ಬರಾವ್ ಹೇಳಿದ್ದಾರೆ.