ನವದೆಹಲಿ: ಡಿಸೆಂಬರ್ 25ರಂದು ದೇಶದ 9 ಕೋಟಿ ರೈತರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದು, ಈ ಸಂದರ್ಭದಲ್ಲಿ ಕೃಷಿ ಕಾನೂನುಗಳ ಕುರಿತು ಕೇಂದ್ರ ಸರಕಾರದ ನಿಲುವನ್ನು ಸ್ಪಷ್ಟಪಡಿಸಲಿದ್ದಾರೆ.
ಆರು ರಾಜ್ಯಗಳ ಆಯ್ದ ರೈತರೊಂದಿಗೆ ಪ್ರಧಾನಿ ಸಮಾಲೋಚನೆ ನಡೆಸಲಿದ್ದಾರೆ. ರೈತರು ತಮ್ಮ ಅನುಭವವನ್ನು ಹಂಚಿಕೊಳ್ಳುವುದರೊಂದಿಗೆ ರೈತರ ಕಲ್ಯಾಣಕ್ಕಾಗಿ ಸರಕಾರ ತೆಗೆದುಕೊಂಡಿರುವ ಉಪಕ್ರಮಗಳ ಕುರಿತು ತಿಳಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.
ಇದರ ನಡುವೆ ಭಾರತೀಯ ಕಿಸಾನ್ ಯೂನಿಯನ್ನ ಮುಖ್ಯಸ್ಥ ಶಿಯೋರಾಜ್ ಸಿಂಗ್ ಪ್ರಧಾನಿ ಮೋದಿಯವರಿಗೆ ರಕ್ತದಲ್ಲಿ ಪತ್ರ ಬರೆದಿದ್ದು, ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ.
ಕೃಷಿ ಕಾಯ್ದೆ ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ರೈತ ಹೋರಾಟ ದಿನೇದಿನೆ ಕಾವು ಹೆಚ್ಚಿಸಿಕೊಳ್ಳುತ್ತಲೇ ಇದೆ. ಕೇಂದ್ರದೊಂದಿಗಿನ ಮಾತುಕಥೆಯೂ ಹಲವು ಬಾರಿ ವಿಫಲವಾಗಿದೆ. ಇದೀಗ ರೈತರೊಂದಿಗೆ ಮಾತನಾಡಲು ಪ್ರಧಾನಿ ನರೇಂದ್ರ ಮೋದಿಯವರು ಮುಂದೆ ಬಂದಿದ್ದು, ಅನ್ನದಾತನ ಸಂಕಷ್ಟ ಪರಿಹಾರವಾಗಲಿದೆಯೇ ಎಂದು ಕಾದು ನೋಡಬೇಕಿದೆ.