ಚೆನ್ನೈ : ನಿವಾರ್ ಚಂಡಮಾರುತ ತನ್ನ ಆಟಾಟೋಪ ಕೊನೆಗಾಣಿಸಿದ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗಿದ್ದು, ಚಂಡಮಾರುತವಾಗಿ ಪರಿಣಮಿಸಲಿದೆ. ಈ ಚಂಡಮಾರುತಕ್ಕೆ ಬುರೇವಿ ಎಂದು ಹೆಸರಿಡಲಾಗಿದ್ದು ತಮಿಳುನಾಡಿಗೆ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ.
ಡಿಸೆಂಬರ್ 2ರ ರಾತ್ರಿಯ ವೇಳೆಗೆ ಈ ಚಂಡಮಾರುತ ಶ್ರೀಲಂಕಾವನ್ನು ಹಾದುಹೋಗುವ ನಿರೀಕ್ಷೆ ಇದ್ದು, ಡಿ.3ರ ಮುಂಜಾನೆ ಕನ್ಯಾಕುಮಾರಿ ಕರಾವಳಿ ತೀರವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು ಸಮುದ್ರ ತೀರದ ವಾಸಿಗಳನ್ನು ಸ್ಥಳಾಂತರಿಸಲಾಗಿದೆ.
ಚಂಡಮಾರುತದ ಪರಿಣಾಮವಾಗಿ ದಕ್ಷಿಣ ತಮಿಳುನಾಡು, ಕೇರಳ, ಪುದುಚೇರಿ, ಕಾರೈಕಲ್, ದಕ್ಷಿಣ ಆಂಧ್ರ ಕರಾವಳಿ ಮತ್ತು ಲಕ್ಷ ದ್ವೀಪದಲ್ಲಿ ಡಿ.1ರಿಂದ ಡಿ.4ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಬುರೇವಿ ಚಂಡಮಾರುತ ರಾಜ್ಯಕ್ಕೂ ಅಪ್ಪಳಿಸಲಿದ್ದು ಇದರಿಂದ ರಾಜ್ಯಕ್ಕೆ ಹೆಚ್ಚು ಪ್ರಭಾವ ಬೀರುವ ಮುನ್ಸೂಚನೆಗಳಿಲ್ಲ. ಆದರೆ, ದಕ್ಷಿಣ ಒಳನಾಡಿನಲ್ಲಿ ಕೆಲವೆಡೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದ್ದಾರೆ. ಚಂಡಮಾರುತದ ಪ್ರಭಾವ ರಾಜ್ಯದ ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಡಿ.3 ಮತ್ತು 4ರಂದು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇರುವುದರಿಂದ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ’.