ನವದೆಹಲಿ: ಕೋವಿಡ್ 19 ಹಿನ್ನೆಲೆಯಲ್ಲಿ ದೂರದ ಯುನೈಟೆಡ್ ಆಫ್ ಅರಬ್ ಎಮಿರೇಟ್ಸ್ (UAE)ನಲ್ಲಿ ಬಿಸಿಸಿಐ ಐಪಿಎಲ್ ಪಂದ್ಯ ಆಯೋಜಿಸಿತ್ತು. ಇತ್ತೀಚೆಗಷ್ಟೇ ಮುಕ್ತಾಯಗೊಂಡ 13ನೇ ಆವೃತ್ತಿಯ ಇಂಡಿಯನ್ ಪ್ರಿಮೀಯರ್ ಲೀಗ್ ಯಾವ ರೀತಿಯಲ್ಲಿ ಯಶಸ್ಸು ಕಂಡಿದೆ ಎಂಬುದರ ಭಾಗವಾಗಿ ಇಂದು ಪ್ರಸ್ತುತ ಟೂರ್ನಿಯಲ್ಲಿ ಹರಿದು ಬಂದ ಆದಾಯ ಮತ್ತು ಖರ್ಚು ವೆಚ್ಚಗಳ ಬಗ್ಗೆ ಬಿಸಿಸಿಐ ಮಾಹಿತಿ ನೀಡಿದೆ.
ಕೊರೋನಾ ಆವೃತ್ತಿಯ ಐಪಿಎಲ್ ಪಂದ್ಯಾವಳಿಗಳ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ನಾವು ಕೊರೋನಾ ಮಧ್ಯೆ ಐಪಿಎಲ್ 2020 ಆಯೋಜಿಸಿ 4,000 ಕೋಟಿ ಆದಾಯ ಗಳಿಸಿದ್ದೇವೆ ಎಂದಿದ್ದಾರೆ. ಅಲ್ಲದೆ ನಮ್ಮ ಟಿವಿ ವೀಕ್ಷಣೆಯಲ್ಲಿ ಶೇ.25 ರಷ್ಟು ಹೆಚ್ಚಾಗಿದೆ. ಮುಂಬೈ-ಚೆನ್ನೈ ನಡುವಣ ಓಪನಿಂಗ್ ಪಂದ್ಯ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆ ಕಂಡ ಉದ್ಘಾಟನಾ ಪಂದ್ಯ ಎಂದು ತಿಳಿಸಿದ್ದಾರೆ.
ಕಳೆದ ಬಾರಿಗೆ ಹೋಲಿಸಿದರೆ ಈ ಐಪಿಎಲ್ ಶೇ.35ರಷ್ಟು ಖರ್ಚು ಕಡಿಮೆಗೊಳಿಸುವಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಯಶಸ್ವಿಯಾಗಿದೆ.
ಸಾಂಕ್ರಾಮಿಕ ರೋಗ ಕೊರೋನಾ ಕಾಟದ ಸಂದರ್ಭದಲ್ಲೂ 4 ಸಾವಿರ ಕೋಟಿ ಆದಾಯ ಗಳಿಸಿದ್ದೇವೆ. ಐಪಿಎಲ್ ಸಂಪೂರ್ಣ ರದ್ದಾಗಿದ್ದರೆ ಬಿಸಿಸಿಐ ಬರೋಬ್ಬರಿ 4,000 ಕೋಟಿ ರೂಪಾಯಿಗಳ ನಷ್ಟ ಅನುಭವಿಸುತ್ತಿತ್ತು. ಇದೇ ಕಾರಣಕ್ಕೆ ವಿದೇಶದಲ್ಲಾದರೂ ಟೂರ್ನಿಯನ್ನು ನಡೆಸುವ ಅನಿವಾರ್ಯ ಬಿಸಿಸಿಐಗೆ ಎದುರಾಗಿತ್ತು ಮತ್ತು ಇದೀಗ ಬಿಸಿಸಿಐ ಯಶಸ್ವಿಯಾಗಿ ಐಪಿಎಲ್ ಪಂದ್ಯಾವಳಿಗಳನ್ನು ಮುಗಿಸಿದೆ ಎಂದು ಅವರು ಹೇಳಿದರು.
ಯುಎಇ ಐಪಿಎಲ್ 2020 ಆತಿಥ್ಯ ವಹಿಸಿ ಯಶಸ್ವಿಯಾಗಿ ನಡೆಸಿದ ಕಾರಣಕ್ಕೆ ಬಿಸಿಸಿಐ ಬರೋಬ್ಬರಿ 14 ಮಿಲಿಯನ್ ಡಾಲರ್ಸ್ ಅಂದರೆ ಸುಮಾರು 100 ಕೋಟಿ ರೂ. ನೀಡಿದೆ ಎಂದು ಅವರು ಹೇಳಿದರು.ಇನ್ನು ಈ ಬಾರಿಯ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸುವ ಮೂಲಕ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಗೆಲುವು ಸಾಧಿಸಿ ದಾಖಲೆಯ ಐದನೇ ಬಾರಿ ಪ್ರಶಸ್ತಿಗೆ ಮುತ್ತಿಟ್ಟಿತು.