ಬರಹ :Bhavan Mundodi
ಮಲೆನಾಡು…ಒಂಟಿ ಮನೆ .ಮಧ್ಯರಾತ್ರಿ ಸರಿಯಾಗಿ 1 ಘಂಟೆ 10 ನಿಮಿಷ . ಅಮವಾಸ್ಯೆಯ ಕಗ್ಗತ್ತಲು ಅದರ ಜೊತೆಗೆ ಬಿಟ್ಟು ಬಿಡದೇ ಸುರಿಯುತ್ತಿರುವ ‘ಆಟಿ’ ಮಳೆ. ದೂರದಲ್ಲಿ ಕರ್ಕಶವಾಗಿ ಊಳಿಡುತ್ತಿರುವ ಅನಾಮಿಕ ಶ್ವಾನ .ಆಕಾಶವೇ ಕಳಚಿ ಬಿತ್ತೇನೋ ಎಂಬಂತೆ ಆರ್ಭಟಿಸುತ್ತಿರುವ ಗುಡುಗು, ಮಿಂಚು, ಗಾಳಿ. ಗಾಳಿಯ ರಭಸಕ್ಕೆ ಮನೆಯ ಕಿಟಕಿಗಳೆಲ್ಲ ಪಟಾರ್ ಪಟಾರ್ ಎಂದು ಹೊಡೆದುಕೊಳ್ಳುತ್ತಿದ್ದರೆ ಗುಡುಗಿನ ಆರ್ಭಟ ಲಘು ಭೂಕಂಪದ ಅನುಭವ ತರುತಿತ್ತು. ಆದರೆ ಇದ್ಯಾವುದರ ಪರಿವೇ ಇಲ್ಲದೇ, ಚಿರನಿದ್ರೆಗೆ ಜಾರಿದಂತೆ ಮಲಗಿದ್ದ ನಮ್ಮ ‘ಡೆಲ್ಲಿ ಸುರೇಶ’. ಡಬ್ ಡಬ್…ಡಬ್ ಡಬ್.. ಬಾಗಿಲು ಬಡಿದ ಶಬ್ದ. ಮತ್ತದೇ ಡಬ್ ಡಬ್..ಶಬ್ದಕ್ಕೆ ಎಚ್ಚರಗೊಂಡವನೇ ‘ಕೌನ್ ರೇ ವೋ’ ಎಂದುಕೊಂಡು ನಿದ್ದೆಗಣ್ಣಿಂದಲೇ ಬಾಗಿಲ ಚಿಲಕ ತೆಗೆದ. ಬಾಗಿಲು ತೆರೆದು ನೋಡಿದವನಿಗೆ ಶಾಕ್ ಆಗಿತ್ತು. ಯಾಕೆಂದರೆ ಅಲ್ಲಿ ಆತನಿಗೆ ಕರಾಳ ಕಗ್ಗತ್ತಲ ದರ್ಶನವಾಗಿದ್ದು ಬಿಟ್ಟರೆ ಬೇರೇನೂ ಕಾಣಿಸಲಿಲ್ಲ. ಏ ಎಲ್ಲೋ ಭ್ರಮೆ ಎಂದುಕೊಂಡವನೇ ಮತ್ತೆ ತನ್ನ ಹಾಸಿಗೆಯ ಹಾದಿ ಹಿಡಿದ .ಇನ್ನೇನು ಮಲಗೋಕೆ ಸಿದ್ಧತೆ ಮಾಡಿಕೊಳ್ಳಬೇಕು ಅನ್ನುವಷ್ಟರಲ್ಲಿ ಮತ್ತದೇ ಡಬ್ ಡಬ್..ಡಬ್ ಡಬ್..ಈ ಬಾರಿ ಸುರೇಶನ ನಿದ್ರೆ ಪೂರ್ಣ ಬಿಟ್ಟಿತ್ತು ಮಳೆಯೂ ನಿಂತಿತ್ತು. ಬಾಗಿಲು ತೆರೆದವನಿಗೆ ಮತ್ತೆ ನಿರಾಸೆ ದಿಗ್ಭ್ರಮೆ, ಭಯ. ಮತ್ತೆ ಕಗ್ಗತ್ತಲ ದರ್ಶನ. ಆದರೆ ಈ ಬಾರಿ ಬಾಗಿಲು ಬಡೆದಿದ್ದು ಭ್ರಮೆ ಅಂತೂ ಅಲ್ಲ. ಹಾಗಾದರೆ ಬಾಗಿಲು ಬಡೆದಿದ್ದು ಯಾರು? ಮಳೆ ನಿಂತು ತಂಪಾದ ಗಾಳಿ ತನ್ನ ಪಾಡಿಗೆ ನಿಶ್ಯಬ್ಧವಾಗಿ ಬೀಸತೊಡಗಿತ್ತು…
ಡೆಲ್ಲಿ ಸುರೇಶನ ಮೂಲ ಹೆಸರು ಸುರೇಶ್ ಶಿವರಾಂ. ತನ್ನ ತಂದೆಯ ಹೆಸರಾದ ಶಿವರಾಂ ಅನ್ನೋ ಹೆಸರನ್ನೇ ತನ್ನ ಹೆಸರಿನ ಮುಂದೆ ಸೇರಿಸಿಕೊಂಡಿದ್ದ. ಆದರೆ ಉದ್ಯೋಗ ನಿಮಿತ್ತ ರಾಷ್ಟ್ರ ರಾಜಧಾನಿ ದೆಹಲಿ ಸೇರಿದ ನಂತರದಲ್ಲಿ ಊರಿನವರೆಲ್ಲ ‘ಡೆಲ್ಲಿ ಸುರೇಶ’ ಅಂತ ಕರೆಯುತ್ತಿದ್ದರು. ಕಾಲಕ್ರಮೇಣ ಸುರೇಶ್ ನ ಹೆಸರೇ ‘ಡೆಲ್ಲಿ ಸುರೇಶ್ ‘ ಆಗಿ ಬದಲಾಗಿತ್ತು.
ಚಿಕ್ಕ ಹಳ್ಳಿಯ ಸಂಪ್ರದಾಯಸ್ಥ ಕುಟುಂಬದಲ್ಲಿ ಸುರೇಶ್ ನ ಜನನವಾಗಿತ್ತು. ಅಪ್ಪ ಅಮ್ಮನ ಏಕಮಾತ್ರ ಸುಪುತ್ರ. ಆದರೆ ಅಮ್ಮ ದೇವಕಿ ಸ್ತನ ಕ್ಯಾನ್ಸರ್ಗೆ ಸುರೇಶ್ ನ 10 ನೇ ವಯಸ್ಸಿಗೆ ವಿಧಿವಶಳಾಗಿದ್ದಳು. ಸುರೇಶ ಕಷ್ಟಪಟ್ಟು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ತನ್ನ ಇಂಜಿನಿಯರಿಂಗ್ ಮುಗಿಸಿದ್ದ. ಪ್ರತಿಷ್ಠಿತ ಸಂಸ್ಥೆಯಲ್ಲಿ ನೌಕರಿನೂ ಸಂಪಾದಿಸಿ 1 ವರುಷ ಬೆಂಗಳೂರಿನಲ್ಲಿ ದುಡಿದು ನಂತರ ಡೆಲ್ಲಿ ಸೇರಿದ್ದ. ಅತ್ತ ಮಗ ಡೆಲ್ಲಿ ಸೇರಿದ್ದ ಇತ್ತ ಅಪ್ಪ ಶಿವರಾಂ ಶಿವನ ಪಾದ ಸೇರುವ ಆತುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಒಟ್ಟಿನಲ್ಲಿ ಸುರೇಶ್ ಮಾತ್ರ ಈ ಜಂಜಾಟದಲ್ಲಿ ಏಕಾಂಗಿಯಾಗಿ ಹೈರಾಣಾಗಿದ್ದ . ಆದರೆ ಏಕಾಂಗಿ ಡೆಲ್ಲಿ ಸುರೇಶನ ಬಾಳಲ್ಲಿ ಅರ್ಧಾಂಗಿಯೊಬ್ಬಳ ಪ್ರವೇಶ ಆಗುವುದರಲ್ಲಿತ್ತು…!!
ಕಂಪನಿಯವರೇ ಕೊಟ್ಟಿದ್ದ ಅಪಾರ್ಟ್ಮೆಂಟ್ ನಲ್ಲಿ ಸುರೇಶನ ವಾಸ. ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 6ರ ವರಗೆ ಕೆಲಸ. ಮತ್ತೆ ಅದೇ ಅಪಾರ್ಟ್ಮೆಂಟ್. ದಿನನಿತ್ಯದ ಕೆಲಸ, ವಾರಕ್ಕೊಮ್ಮೆ ಪ್ರೆಂಡ್ಸ್ ಜೊತೆ ಔಟಿಂಗ್, ಲೇಟ್ ಆಗಿ ಪಾರ್ಟಿ ಇದಿಷ್ಟೇ ಡೆಲ್ಲಿ ಸುರೇಶನ ದಿನಚರಿ. ಹೀಗೆ ಮುಂದುವರೆದಿತ್ತು ಸುರೇಶನ ಜೀವನ. ಅವತ್ತು ಶನಿವಾರ ಮಾಮೂಲಿ ದಿನಚರಿ ಎಂಬಂತೆ ಗೆಳೆಯರ ಜೊತೆ ಡಿನ್ನರ್ ಹೋಗಿದ್ದ. IT BT ಕಂಪನಿಗಳಲ್ಲಿ ಹುಡುಗ ಹುಡುಗಿಯರು ಒಟ್ಟಾಗಿ ಔಟಿಂಗ್ ಹೋಗುವುದು ಕಾಮನ್. ಆ ಶನಿವಾರದ ಡಿನ್ನರ್ ಗೂ ಕಂಪನಿಯ ಸಹದ್ಯೋಗಿಗಳು ಬಂದಿದ್ದರು. ಅವತ್ತು ಡೆಲ್ಲಿ ಸುರೇಶನಿಗೆ ಪರಿಚಯ ಆದವಳೇ ತಿಳಿ ಕಣ್ಣಿನ ಸುಂದರಿ ಮಾನ್ವಿಕ….
ತಿಳಿ ಕಪ್ಪು ಬಣ್ಣದ ಸುಂದರ ನಯನ,ಜೇನಿನ ಹನಿಯಂತ ತುಟಿಗಳು, ಸೊಗಸಾದ ಮೂಗು ಅದಕ್ಕೆ ದೃಷ್ಟಿಯಾಗುತ್ತೇನೋ ಎಂಬಂತೆ ಚುಚ್ಚಿದ್ದ ಪುಟಾಣಿ ಮೂಗುತಿ. ಬೊಗಸೆಯಲ್ಲಿ ಹಿಡಿದಿಟ್ಟುಕೊಳ್ಳಬೇಕು ಎಂದೆನಿಸುವ ಮುಖಚಹರೆ, ಆ ಮೊಗಕ್ಕೆ ಕಳಸವಿಟ್ಟಂತ್ತಿದ್ದ ಹಣೆಯ ಮೇಲಿನ ತಿಳಿ ಕೆಂಬಣ್ಣದ ಬೊಟ್ಟು. ಕಡುಕಪ್ಪು ಕೇಶರಾಶಿ,ಮೋಹಕ ಮ್ಯೆಮಾಟ. ಈಗಷ್ಟೇ 23 ದಾಟಿ 24 ನೇ ವಯಸ್ಸಿಗೆ ಕಾಲಿಟ್ಟ ಸುಂದರ ಕನ್ಯೆ ಮಾನ್ವಿಕ. ಅಪ್ಪಟ ಕನ್ನಡತಿ. ಸುರೇಶ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಮಾನ್ವಿಕಳೂ ದುಡಿಯುತ್ತಿದ್ದಳು. ಆ ಶನಿವಾರ ಡಿನ್ನರ್ ನಲ್ಲಿ ಸುರೇಶನಿಗೆ ಮಾನ್ವಿಕಳ ಪರಿಚಯವಾಯಿತು. ಒಂದೇ ಕಂಪನಿ ಜೊತೆಗೆ ಇಬ್ಬರೂ ಕನ್ನಡದವರು ಬೇರೆ. ಇಬ್ಬರೂ ಹತ್ತಿರವಾಗಲೂ ಇಷ್ಟೇ ಸಾಕಿತ್ತು. ವಿಧಿಯಾಟವೋ ಏನೋ ಎಂಬಂತೆ ಮಾನ್ವಿಕಳೂ ಸುರೇಶ್ ವಾಸವಿದ್ದ ಅಪಾರ್ಟ್ಮೆಂಟ್ ನಲ್ಲೇ ವಾಸ ಮಾಡುತ್ತಿದ್ದಳು.ಇದೀಗ ಸುರೇಶ್ ಮತ್ತು ಮಾನ್ವಿಕಳ ಸ್ನೇಹ ಗಟ್ಟಿಯಾಗಿತ್ತು. ಸ್ನೇಹ ಪ್ರೀತಿಗೆ ತಿರುಗಲು ಹೆಚ್ಚು ಕಾಲವಕಾಶ ಬೇಕಾಗಿರಲಿಲ್ಲ. ಒಬ್ಬರು ಇನ್ನೊಬ್ಬರನ್ನು ಬಿಟ್ಟಿರಲಾರದಷ್ಟು ಹತ್ತಿರವಾದರು. ಒಂದೇ ಜೀವ ಎರಡು ದೇಹ. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ರೀತಿ ದೇವಲೋಕದ ದೇವತೆಗಳೂ ತಲೆದೂಗಿಸುವಂತಿತ್ತು. ಪ್ರಣಯ ಪಕ್ಷಿಗಳು ಕಾಣದ ಲೋಕದಲ್ಲಿ ಬಾನೆತ್ತರದಲ್ಲಿ ಹಾರಾಡುತ್ತಿದ್ದವು…..
ಪ್ರೀತಿಯ ಉತ್ತುಂಗದಿಂದ ಸಂಸಾರದ ನೌಕೆಯತ್ತ ವಾಲುವ ನಿರ್ಧಾರ ಮಾಡಿ ಸಹಮತದ ಒಮ್ಮತಕ್ಕೆ ಇಬ್ಬರೂ ಬಂದರು. ಮಾನ್ವಿಕ ತನ್ನ ತಂದೆ ತಾಯಿಯೊಡನೆ ಮದುವೆಯ ವಿಷಯ ಪ್ರಸ್ತಾಪಿಸಿ ಒಪ್ಪಿಸಿದರೆ ಅತ್ತ ಸುರೇಶ ತನ್ನ ಸೋದರ ಮಾವ ಮತ್ತು ಸಂಬಂಧಿಕರನ್ನು ಒಪ್ಪಿಸಿದ. ಎರಡೂ ಕುಟುಂಬಗಳ ಒಪ್ಪಿಗೆಯ ನಂತರ ಸುರೇಶನ ಹುಟ್ಟೂರಿನಲ್ಲಿ ಅದ್ಧೂರಿಯಾಗಿ ವಿವಾಹ ಮಹೋತ್ಸವ. ಚಿ.ರಾ.ಸುರೆಶ್ ವೆಡ್ಸ್ ಚಿ.ಸೌ.ಮಾನ್ವಿಕ. ಪ್ರಣಯ ಪಕ್ಷಿಗಳಿಗೆ ವಿವಾಹ ಬಂಧ. ಬಂದಿದ್ದ ಅತಿಥಿಗಳೆಲ್ಲ ಪುರೋಹಿತರ ಮಂತ್ರಘೋಷಗಳೊಂದಿಗೆ ಅಕ್ಷತೆ ಕಾಳು ಹಾಕಿ ನೂರು ಕಾಲ ಸುಖವಾಗಿರಿರೆಂದು ನೂತನ ವಧುವರರಿಗೆ ಆಶೀರ್ವಾದಿಸಿ ನೂತನ ಜೀವನಕ್ಕೆ ಬೀಳ್ಕೊಟ್ಟರು. ಆದರೆ ವಿಧಿ ತನ್ನ ಷಡ್ಯಂತರಕ್ಕೆ ಹೊಂಚು ಹಾಕಿ ಕುಳಿತ್ತಿತ್ತು….!!!
ಮದುವೆಯಾದ ನಂತರ ಸುರೇಶ ಮತ್ತು ಮಾನ್ವಿಕಳ ಪ್ರಿತಿ ಇನ್ನೂ ಹೆಚ್ಚಾಗಿತ್ತು .ಇಬ್ಬರೂ ತಮ್ಮ ದೆಹಲಿಯ ಕೆಲಸಕ್ಕೆ ರಾಜೀನಾಮೆ ನೀಡಿ ಊರಿನಲ್ಲಿದ್ದ ಜಮೀನಿನಲ್ಲಿ ಕೃಷಿಗೆ ಇಳಿದರು. ಜೊತೆಗೆ ಊರಿಗೆ ಹತ್ತಿರವಿರುವ ಪೇಟೆಯಲ್ಲಿ ತಮ್ಮದೇ ಸ್ವಂತ ಉದ್ಯಮವನ್ನೂ ಶುರುಮಾಡಿದರು. ಸುರೇಶನಿಗೆ ಚಿಕ್ಕಂದಿನಿಂದಲೇ ತನ್ನ ತಾಯಿಯ ಪ್ರೀತಿ ಸಿಗದಿದ್ದರಿಂದ ಪ್ರೀತಿಯ ಹಸಿವು ಏನೆಂದು ಅರಿತಿದ್ದ. ಆದರೆ ತನ್ನ ತಾಯಿಯ ಪ್ರೀತಿಯನ್ನೂ ಮೀರಿಸುವಂತೆ ಮಾನ್ವಿಕ ಸುರೇಶನನ್ನು ಪ್ರೀತಿಸುತ್ತಿದ್ದಳು. ಅತ್ತ ಡೆಲ್ಲಿ ಸುರೇಶ ತನ್ನ ಹೆಂಡತಿಯನ್ನ ದೇವತೆ ಎಂದು ಪೂಜಿಸುತ್ತಿದ್ದರೆ ಮಾನ್ವಿಕ ಪತಿಯೇ ಪರಮೇಶ್ವರ ಎನ್ನುವಂತೆ ತನ್ನ ಪತಿಯ ತೋಳುಗಳಲ್ಲಿ ಬಂಧಿಯಾಗಿದ್ದಳು. ಇವರಿಬ್ಬರ ಅನ್ಯೊನ್ಯತೆಗೆ ಲೌಕಿಕ ಭಾವನೆಗಳೆಲ್ಲ ನಗಣ್ಯವಾಗಿದ್ದವು. ನಿಜವಾದ ಪ್ರೀತಿಯ ಮೋಡಿಯೇ ಹಾಗೆ.ಬೆಲೆಕಟ್ಟಲಾಗದ ಪ್ರೀತಿಯ ಸಂಬಂದಕ್ಕೆ ಇಬ್ಬರೂ ಅರ್ಥ ಕೊಟ್ಟಿದ್ದರು. ಹೀಗಿರುವಾಗ ಒಂದು ದಿನ ಸುರೇಶನಿಗೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಲಾರಂಬಿಸಿತು.ಮೊದಮೊದಲು ನಿರ್ಲಕ್ಷ್ಯ ಮಾಡಿದರೂ ನಂತರ ತಾನೊಬ್ಬನೇ ವ್ಯೆದ್ಯರ ಹತ್ತಿರ ಹೋಗಿ ಪರೀಕ್ಷೆ ಮಾಡಿಸಿದ. ಕೂಲಂಕಷವಾಗಿ ಪರಿಶೀಲಿಸಿದ ವ್ಯೆದ್ಯರು ನೀವೊಬ್ಬರೇ ಬಂದಿದ್ದೀರಾ ಎಂದು ಕೇಳಿದರು. ಪ್ರಶ್ನಾರ್ಥಕವಾಗಿ ಕೇಳಿದ ವ್ಯೆದ್ಯರ ಪ್ರಶ್ನೆ ಸುರೇಶನ ಮನಸ್ಸಿನಲ್ಲಿ ವಿದವಿಧವಾದ ಯೋಚನೆ ಹುಟ್ಟುಹಾಕಿತ್ತು. ಹೌದು ಒಬ್ಬನೇ ಬಂದಿದ್ದಿನಿ ಯಾಕೆ ಡಾಕ್ಟರ್ ಎಂದು ಮರುಪ್ರಶ್ನೆ ಹಾಕಿದ. ಇಲ್ಲ ನಾಳೆ ನಿಮ್ಮವರು ಯಾರನ್ನಾದರೂ ಜೊತೆಗೆ ಕರೆದುಕೊಂಡು ಬನ್ನಿ ಎಂಬ ಡಾಕ್ಟರ್ ನ ಮರು ಉತ್ತರ. ಕೊನೆಗೂ ಕಾಡಿಬೇಡಿ ಡಾಕ್ಟರ್ ಹತ್ತಿರ ತನಗೆ ಏನಾಗಿದೆ ಎಂದು ಹೇಳಿಸಿಕೊಂಡ. ವ್ಯೆದ್ಯರ ಉತ್ತರ ಕೇಳಿದವನಿಗೆ ಆಕಾಶವೇ ಕಳಚಿ ಬಿದ್ದ ಅನುಭವ. ಮೈಯೆಲ್ಲಾ ಬೆವರಲಾರಂಭಿಸಿದ. ನಿಂತ ಜಾಗದಲ್ಲಿ ನಿಲ್ಲಲಾರದೆ ಕುಸಿದು ಬಿದ್ದ. ಹೌದು ಸುರೇಶ ನಿಗೆ ಮಾರಣಾಂತಿಕ ಕ್ಯಾನ್ಸರ್ ಕೊನೆಯ ಹಂತ ತಲುಪಿತ್ತು .ಆತನ ಸಾವಿಗೆ ಕೆಲವೇ ದಿನಗಳು ಬಾಕಿ ಉಳಿದಿತ್ತು .ಆದರೆ ಸುರೇಶನಿಗೆ ತನ್ನ ಸಾವಿನ ಚಿಂತೆಯಿರಲಿಲ್ಲ ಬದಲಾಗಿ ತನ್ನ ಪ್ರೀತಿಯ ಮಡದಿ ತಾನಿರಲಾರದೆ ಬದುಕಿರಲಾರಳು ಅನ್ನುವ ಕಟುಸತ್ಯ ಆತನಿಗೆ ಗೊತ್ತಿತ್ತು .ಅಲ್ಲದೇ ತಾನಿರದೇ ಅವಳು ಪ್ರತಿನಿತ್ಯ ಸತ್ತು ಬದುಕುವುದು ಆತನಿಗೂ ಇಷ್ಟವಿರಲಿಲ್ಲ. ದೇವರಿಗೂ ಇವರಿಬ್ಬರ ಅನ್ಯೋನ್ಯತೆ ಹೊಟ್ಟೆಕಿಚ್ಚು ತರಿಸಿತ್ತೇನೋ. ಅವತ್ತೇ ಸುರೇಶ ‘ಅದೊಂದು’ನಿರ್ಧಾರಕ್ಕೆ ಬಂದಿದ್ದ…..!!!!
ಅವತ್ತು ಸೀದಾ ಮನೆಗೆ ಬಂದವನೇ ಏನೂ ನಡೆದಿಲ್ಲವೇನೋ ಎಂಬಂತೆ ತನ್ನ ದಿನನಿತ್ಯದ ಕೆಲಸದಲ್ಲಿ ತೊಡಗಿಸಿಕೊಂಡ.ತನ್ನ ಪ್ರೀತಿಯ ಮಡದಿಗೆ ಈ ವಿಷಯ ಗೊತ್ತಗಲೇಬಾರದೆಂಬ ಕಟು ನಿರ್ಧಾರಕ್ಕೆ ಬಂದಿದ್ದ. ಯಾವತ್ತೂ ಯಾವುದನ್ನು ತನ್ನ ಹೆಂಡತಿಯ ಜೊತೆ ಮುಚ್ಚಿಡದ ಸುರೇಶ್ ಈ ಬಾರಿ ತನ್ನ ಜೀವನದ ಅತಿದೊಡ್ಡ ರಹಸ್ಯವನ್ನು ಮುಚ್ಚಿಟ್ಟಿದ್ದ. ಅದು ತಾನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ತನ್ನ ಮುದ್ದಿನ ಮಡದಿಯ ಜೊತೆ. ಆದರೆ ತನ್ನ ಪತಿ ಎಷ್ಟೇ ಮಚ್ಚಿಟ್ಟರೂ ಮಾನ್ವಿಕಳಿಗೆ ತನ್ನ ಪ್ರೀತಿಯ ಪತಿಯ ಬದಲಾವಣೆಯ ವಾಸನೆ ಬಡೆದಿತ್ತು. ಇತ್ತ ಸುರೇಶ ತನ್ನ ಕಡೇ ದಿನಗಳನ್ನು ಎಣಿಸುತ್ತಿದ್ದರೆ ಮಾನ್ವಿಕಳ ಮನಸ್ಸು ಹೆಂಡ ಕುಡಿದ ಕೋತಿಯಂತಾಗಿತ್ತು. ಕೊನೆಗೂ ಸುರೇಶ್ ಡಾಕ್ಟರ್ ಹತ್ತಿರ ಹೋಗಿಬಂದ ವಿಷಯ ಊರವರ ಸಹಾಯದಿಂದ ಮಾನ್ವಿಕ ಪತ್ತೆ ಹಚ್ಚುತ್ತಾಳೆ. ಒಂದು ಕ್ಷಣವೂ ಮಿಸ್ ಮಾಡದೆ ವ್ಯೆದ್ಯರನ್ನ ಭೇಟಿಯಾಗುತ್ತಾಳೆ.ಇದೀಗ ಮೂರ್ಛೆ ಹೋಗುವ ಸರದಿ ಮಾನ್ವಿಕಳದಾಗಿತ್ತು. ಮಾನ್ವಿಕಳ ಜಂಘಾಬಲವೇ ಉಡುಗಿಹೋಗಿತ್ತು. ಕಣ್ಣಂಚಿನಲ್ಲಿ ನೀರು ತೋಯತೊಡಗಿತ್ತು.ಆದರೆ ಡಾಕ್ಟರ್ ಹೇಳಿದ ಅದೊಂದು ಮಾತು ಮಾತ್ರ ಅವಳಲ್ಲಿ ಧೈರ್ಯ ತಂದಿತ್ತು. ಮರುಭೂಮಿಯಲ್ಲಿ ‘ಒಯಾಸಿಸ್ ‘ಸಿಕ್ಕಂತಾಗಿತ್ತು ಮಾನ್ವಿಕಳಿಗೆ. ಹೌದು..ಸುರೇಶ್ ಕ್ಯಾನ್ಸರ್ನಿಂದ ತನ್ನ ಕಡೆಯ ದಿನಗಳನ್ನು ಎಣಿಸುತ್ತಿರುವುದೇನೊ ನಿಜ, ಆದರೆ ಚಿಕಿತ್ಸೆಯ ಜೊತೆ ಪ್ರೀತಿಯ ಶುಶ್ರೂಷೆಯಿಂದ ಬದುಕುಳಿದರೂ ಬದುಕುಳಿಯಬಹುದು, ಪ್ರಪಂಚದಲ್ಲಿ ಹೀಗೆ ಬದುಕುಳಿದವರ ಸಂಖ್ಯೆ ವಿರಳವಾದರೂ ಬೆರಳೆಣಿಕೆಯಷ್ಟು ಮಂದಿ ಸಫಲವಾಗಿದ್ದಾರೆ ಎಂಬ ಡಾಕ್ಟರ್ ನ ಮಾತು ಮಾನ್ವಿಕಳಿಗೆ ಸ್ವಲ್ಪ ಸಮಾದಾನ ತಂದಿತ್ತು.ಆದರೆ ಪತಿಗೆ ಕ್ಯಾನ್ಸರ್ ಇದೆ ಎಂದು ತನಗೆ ಗೊತ್ತಗಿರುವ ಈ ಕ್ರೂರ ಸತ್ಯವನ್ನು ಸುರೇಶ ನಿಗೆ ಹೇಳಲು ಮನಸ್ಸು ಒಪ್ಪಲಿಲ್ಲ. ಹೇಗೆ ತಾನೆ ಒಪ್ಪೀತು.ಆತ ಹೃದಯವಾದರೆ ಅವಳು ಅವನ ಉಸಿರಾಗಿದ್ದಳು. ಅವನು ಕನ್ನಡಿಯಾದರೆ ಅವಳು ಅದರ ಪ್ರತಿಬಿಂಬವಾಗಿದ್ದಳು. ಆದರೆ ಸುರೇಶ್ ಬೇರೆಯದ್ದೇ ಲೆಕ್ಕಾಚಾರದಲ್ಲಿದ್ದ..!!
ಈಗ ಮಾನ್ವಿಕ ತನ್ನ ಪತಿದೇವರನ್ನ ಮೊದಲಿಗಿಂತಲೂ ಹೆಚ್ಚಾಗಿ ಪ್ರಿತಿ ಮಾಡತೊಡಗಿದಳು. ಸುರೇಶ್ ತನ್ನ ದೇವತಾ ಪತ್ನಿಗೆ ತಿಳಿಯದಂತೆ ಚಿಕಿತ್ಸೆ ತೆಗೆದುಕೊಳ್ಳತೊಡಗಿದ್ದ..ಆದರೆ ಕೆಲದಿನಗಳ ನಂತರ ಸಾಯುವವನಿಗೆ ಚಿಕಿತ್ಸೆ ಏಕೆಂದು ಚಿಕಿತ್ಸೆ ನಿಲ್ಲಿಸಿದ್ದ.ಅದೇ ದುಡ್ಡಿನಲ್ಲಿ ಪ್ರೀತಿಯ ಹೆಂಡತಿಗೆ ಒಡವೆ ಮತ್ತು ರೇಷ್ಮೆ ಸೀರೆ ಕೊಡಿಸಿದ್ದ.ಅತ್ತ ಮಾನ್ವಿಕನಿಗೆ ತನ್ನ ಪತಿಯನ್ನ ಕಳೆದುಕೊಳ್ಳಲು ಸುತಾರಂ ಇಷ್ಟವಿರಲಿಲ್ಲ. ದೇವರಿಗೆ ಚಾಲೆಂಜ್ ಹಾಕಿದಂತೆ ತನ್ನ ಪತಿಯ ಆರೈಕೆಯಲ್ಲಿ ತೊಡಗಿದಳು. ಸುರೇಶನಿಗೆ ಗೊತ್ತಾಗದಂತೆ ದಿನದ 24 ತಾಸಿನ ಪ್ರತಿಕ್ಷಣವೂ ಆತನ ಬೆನ್ನುಬಿದ್ದು ಲಾಲನೆ ಪಾಲನೆಯಲ್ಲಿ ತೊಡಗಿದಳು. ಆದರೆ ಸಮಯ ತನ್ನ ಕಾಲಚಕ್ರವನ್ನ ಉರುಳಿಸುವದನ್ನ ಮರೆತಿರಲಿಲ್ಲ. ಸುರೇಶನಿಗೆ ತನ್ನ ಸಾವು ತುಂಬಾ ಸನಿಹದಲ್ಲೇ ಸುಳಿದಾಡುತ್ತಿದೆ ಎಂದೆನಿಸಿತು.ಹೆಚ್ಚೆಂದರೆ ನಾಳೆಯವರೆಗೆ ನಾನು ಬದುಕಬಹುದು ಎಂದುಕೊಂಡವನೇ ಗಟ್ಟಿ ಮನಸ್ಸು ಮಾಡಿ “ಆ ನಿರ್ಧಾರದತ್ತ” ಕಾರ್ಯಪ್ರವೃತ್ತನಾದ …..!!!
ಅವತ್ತು ಶುಭ ಶುಕ್ರವಾರ .ಬೆಳಗ್ಗೆ ಎದ್ದವನೇ ತನ್ನ ಮುದ್ದಿನ ಮಡದಿಯನ್ನ ಔಟಿಂಗ್ ಹೋಗೋಣ ಎಂದೇಳಿ ತಾನೇ ಕೊಡಿಸಿದ ಒಡವೆ ,ರೇಷ್ಮೆ ಸೀರೆಯನ್ನ ತಾನೇ ಉಡಿಸಿ ದೆಹಲಿಯತ್ತ ಹೊರಟ. ತಾವುಗಳು ಮೊದಲು ಭೇಟಿಯಾಗಿ ಡಿನ್ನರ್ ಮಾಡಿದ ಸ್ಥಳದಿಂದ ಹಿಡಿದು,ವಾಸವಿದ್ದ ಅಪಾರ್ಟ್ಮೆಂಟ್ ನಲ್ಲೆಲ್ಲಾ ವಿಹರಿಸಿ..ಪ್ರಣಯ ಪಕ್ಷಿಗಳಾಗಿದ್ದಾಗ ಸುತ್ತಾಡಿದ್ದ ಜಾಗಗಳಿಗೆ ಹೋಗಿ..ಹಳೆಯ ನೆನಪುಗಳನ್ನ ಸ್ಮೃತಿ ಪಟಲದಿಂದ ಕೆದಕಿ ..ತಮ್ಮ ಹಳೇ ಸ್ನೇಹಿತ ಸ್ನೆಹಿತೆಯರ ಕುಶಲೋಪಚರಿ ವಿಚಾರಿಸಿ,ಮಾನ್ವಿಕಾಳಿಗೆ ಇಷ್ಟವಾದ ನೀರುದೋಸೆ, ಐಸ್ ಕ್ರೀಮ್, ವಡಾಪಾವ್ .. ಇನ್ನು ಅವಳಿಗೆ ಅದೇನೆಲ್ಲ ಇಷ್ಟವೋ ಅದನ್ನೆಲ್ಲಾ ತಿನ್ನಿಸಿ..ಕೊನೆಗೆ ತಾವು ಮದುವೆಯಾಗಿದ್ದ ಕಲ್ಯಾಣಮಂಟಪಕ್ಕೂ ಕರೆದುಕೊಂಡು ಹೋಗಿ ಅವಳು ಹೇಳಿದ್ದ ಕೇಳಿದ್ದ ಆಸೆಯನ್ನೆಲ್ಲಾ ಪೂರೈಸಿ ಪುನಃ ಮನೆ ಸೇರಬೇಕಾದರೆ ಮರುದಿನ ಶನಿವಾರ ಘಂಟೆ ಮಧ್ಯರಾತ್ರಿ 1 ಘಂಟೆ 10 ನಿಮಿಷ.ಮನೆಗೇ ಬಂದವನೇ ತನ್ನ ಮುದ್ದಿನ ಮಡದಿ. ಜೀವಕ್ಕೆ ಜೀವವಾಗಿದ್ದ. ಏಳೇಳು ಜನ್ಮಕ್ಕೂ ಜೊತೆಯಾಗಿರುವೆ ಎಂದು ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಿದ್ದ ತನ್ನ ಪ್ರೀತಿಯ ಪ್ರಿಯತಮೆ ಮಾನ್ವಿಕಳ ಹಣೆಗೆ ಮುತ್ತಿಟ್ಟು ಎದೆಗೆ ಗನ್ ಇಟ್ಟು ಟ್ರಿಗರ್ ಎಳೆದಿದ್ದ…!!!!
ಇತ್ತ ಗುಂಡಿನ ಶಬ್ದಕ್ಕೆ ನೆರೆಹೊರೆಯ ಬಾಂಧವರು ಓಡೋಡಿ ಬಂದು ನೋಡಿದರೆ ಮಾನ್ವಿಕಾ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಳು. ಅತ್ತ ಸುರೇಶ್ ಅದೇ ಗನ್ ನ್ನ ತನ್ನ ಬಲಬದಿಯ ತಲೆಯ ಭಾಗಕ್ಕೆ ಹಿಡಿದು ರಕ್ತ ಸಿಕ್ತವಾಗಿ ಬಿದ್ದಿದ್ದ ತನ್ನ ಮುದ್ದಿನ ಮಡದಿಯನ್ನ ನೋಡುತ್ತಾ ಮೂಕವಿಸ್ಮಿತನಾಗಿ ಕುಳಿತಿದ್ದ..ಅವಳು ಸತ್ತ ನಂತರ ತಾನೂ ಆತ್ಮಹತ್ಯೆಗೆ ಶರಣಾಗುವವನಿದ್ದ. ತಾನು ಸತ್ತ ಕುಳಿತಿದ್ದ ನಂತರ ಅವಳು ಜೀವಂತ ಶವವಾಗುವುದು ಅವನಿಗೆ ಇಷ್ಟವಿರಲಿಲ್ಲ. ಅದಕ್ಕೆ ಇಬ್ಬರೂ ಜೊತೆಗೆ ಸತ್ತು ಸ್ವರ್ಗದಲ್ಲಾದರೂ ಸುಖವಾಗಿರೋಣ ಎಂದು ಯೋಚಿಸಿದ್ದ. ಪೂರ್ವ ತಯಾರಿ ಮಾಡಿಕೊಂಡು ತನ್ನ ಜೀವದ ಗೆಳತಿ ಮಾನ್ವಿಕಳ ಅಂತಿಮ ಕಥೆ ಮುಗಿಸಿದ್ದ. ಅತ್ತ ನೆರೆಹೊರೆಯವರೆಲ್ಲಾ ಸೇರಿ ಮಾನ್ವಿಕಾಳನ್ನ ಆಸ್ಪತ್ರೆ ಸೇರಿಸಿದರೆ ಸುರೇಶ್ ಜೈಲು ಪಾಲಗಿದ್ದ.ಆದರೆ ಆಸ್ಪತ್ರೆ ಸೇರಿದ್ದ ಮಾನ್ವಿಕಳಾ ಕೊನೆ ಉಸಿರು ತನ್ನ ಪ್ರಿಯತಮನ ಉಸಿರಿಗೆ ಕಾಯುತಿತ್ತು.ಹೌದು ಮಾನ್ವಿಕ ಸತ್ತಿರಲಿಲ್ಲ…
ಗಂಭೀರ ಸ್ಥಿತಿಯಲ್ಲಿದ್ದ ಮಾನ್ವಿಕಳಾ ದೇಹದ ಉಸಿರು ತೀವ್ರ ನಿಘಾ ಘಟಕದಲ್ಲಿ ತನ್ನ ಪ್ರಿಯತಮನ ದರ್ಶನಕ್ಕೆ ಕಾಯುತ್ತಿತ್ತು.ಮಾನ್ವಿಕಳ ಕೊನೆಯ ಆಸೆ ತನ್ನ ಪತಿಯ ವೈದ್ಯಕೀಯ ಪರೀಕ್ಷೆ ಮಾಡಿಸುವುದಾಗಿತ್ತು. ಜೈಲಾಧಿಕಾರಿಗಳ ಒಪ್ಪಿಗೆಯೊಂದಿಗೆ ತನ್ನ ಪತಿಯ ಮುಖ ನೋಡುವುದರ ಜೊತೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು .ಇನ್ನೇನು ಸಾಯುವವನಿಗೆ ಯಾವ ಪರೀಕ್ಷೆ ಎಂದುಕೊಂಡೆ ವೈದ್ಯಕೀಯ ಪರೀಕ್ಷೆ ಮುಗಿಸಿದ ಸುರೇಶನಿಗೆ ಆಶ್ಚರ್ಯ ದಿಗ್ಭ್ರಮೆ ದಿಗ್ಭ್ರಾಂತಿ ಎಲ್ಲವೂ ಆಗಿತ್ತು.ಸುರೇಶ್ ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆಯ ಕೊನೆಯ ಹಂತದಿಂದ ಕೆಳಗಿಳಿದಿದ್ದ . ಅಂದರೆ ಸುರೇಶ್ ಬದುಕುಳಿದಿದ್ದ.ಮಾನ್ವಿಕಳಾ ಪ್ರೀತಿಯ ಶುಶ್ರೂಷೆ ಫಲನೀಡಿತ್ತು.ಡೆಲ್ಲಿ ಸುರೇಶ ಬಚಾವಾಗಿದ್ದ.ಆದರೆ ಆತುರದಲ್ಲಿ ತನ್ನ ಮಗದನ್ಯೆಯ ಉಸಿರಿಗೆ ಗುಂಡಿಕ್ಕಿದ್ದ.ತಾನು ಬದುಕುಳಿದ ಖುಷಿಯನ್ನ ತನ್ನ ಮಡದಿಗೆ ತಿಳಿಸಿ ಕೆನ್ನೆಗೆ ಮುತ್ತಿಕ್ಕಿ ಅವಳ ಪಾದ ಹಿಡಿದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ.ಮಾನ್ವಿಕಳ ಆನಂದಕ್ಕೇ ಪಾರವೇ ಇರಲಿಲ್ಲ.ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿಕೊಂಡೇ ಕಣ್ಣಿನಲ್ಲಿ ಆನಂದ ಭಾಷ್ಪ ಸುರಿಯಲಾರಂಭಿಸಿತು. ಮೊಗದಲ್ಲಿ ನಗು ಉಕ್ಕಿತು. ಹೃದಯ ಹಗುರವಾದ ಅನುಭವ.ಏನೋ ಸಾಧಿಸಿದ ಖುಷಿ.ಅತ್ತ ಪತಿ ಸುರೇಶ ಪಾದದ ಬಳಿ ಅಳುತ್ತಿದ್ದರೆ ಪತ್ನಿ ಮಾನ್ವಿಕ ಸುರೇಶ್ ಇಹಲೋಕದ ಯಾತ್ರೆ ಮುಗಿಸಿದ್ದಳು..ಮಾನ್ವಿಕ ತನ್ನ ಪತಿಯ ಜೀವ ಉಳಿಸಿ ತನ್ನ ಜೀವ ತ್ಯಜಿಸಿದ್ದಳು…..
ಜೈಲುವಾಸ ಮುಗಿದ ನಂತರ ಸುರೇಶ ಅರೆಹುಚ್ಚನಾಗಿದ್ದ. ಕ್ಯಾನ್ಸರ್ ಸಂಪೂರ್ಣ ವಾಸಿಯಾಗಿತ್ತು.ಜೈಲಿನಲ್ಲೂ ಹಲವು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲನಾಗಿದ್ದ .ಮತ್ತೆ ಊರಿನ ಮನೆ ಸೇರಿದ್ದ. ಯಾರ ಸಹವಾಸವೂ ಇಲ್ಲದೆ ಒಬ್ಬಂಟಿಯಾಗಿ ಜೀವನ ಸವೆಸುತ್ತಿದ್ದ.ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ತನ್ನ ಪ್ರೇಮಿ ಪ್ರೀತಿಯ ಮಡದಿಯನ್ನ ತಾನೇ ಕೊಂದಿದ್ದ.ಆದರೂ ಅವಳು ಮತ್ತೆ ಸೇರಬಹುದು ಎಂಬ ಹುಚ್ಚು ನಿರೀಕ್ಷೆಯಲ್ಲಿದ್ದ… ರಾತ್ರಿ 1 ಘಂಟೆ 10 ನಿಮಿಷ ಮತ್ತೆ ಬಾಗಿಲು ಬಡಿದ ಶಬ್ದ ಡಬ್ ಡಬ್…ಡಬ್ ಡಬ್……..!!!!!
ಇಂತೀ ನಿಮ್ಮವನೇ..
ಭವನ್ Mundodi