ನವದೆಹಲಿ: ಪ್ರತಿಭಟಿಸುವ ಹಕ್ಕನ್ನು ಜನರಿಗೆ ನೀಡಬೇಕು. ಶಾಂತಿಯುತವಾಗಿ ಪ್ರತಿಭಟನೆ ನಡೆಯಬೇಕು. ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಅವರಿಗೆ ಅವಕಾಶ ನೀಡಬೇಕು ಎಂದು ಕೆನಡಾ ಪ್ರಧಾನಿ ಹೇಳಿದ್ದರು. ಈ ಮಾತು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಹಲವಾರು ಮಂದಿ ಕೆನಡಾ ಪ್ರಧಾನಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆನಡಾ ಪ್ರಧಾನಿ ಟ್ರೂಡೊ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ರೈತರ ಬಗ್ಗೆ ನಿಮ್ಮ ಕಾಳಜಿಯಿಂದ ಖುಷಿಯಾಗಿದೆ. ಆದರೆ ಭಾರತದ ಆಂತರಿಕ ಸಮಸ್ಯೆ ಮತ್ತೊಂದು ರಾಷ್ಟ್ರದ ರಾಜಕೀಯಕ್ಕೆ ಮೇವು ಅಲ್ಲ. ನಾವು ಯಾವಾಗಲೂ ಇತರ ರಾಷ್ಟ್ರಗಳ ಸೌಜನ್ಯವನ್ನು ಗೌರವಿಸುತ್ತೇವೆ ಎಂದಿದ್ದಾರೆ. ಇದೇ ವೇಳೆ ಈ ಬಿಕ್ಕಟ್ಟನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವರು ಮನವಿ ಮಾಡಿದರು. ಬೇರೆ ದೇಶಗಳಿಗೆ ಈ ವಿಷಯ ಆಹಾರ ಆಗುವುದು ಬೇಡ ಎಂದಿದ್ದಾರೆ.
ಮೊದಲು ಕೆನಡಾ ಪ್ರಧಾನಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಭಾರತ, ಪ್ರಜಾಪ್ರಭುತ್ವ ರಾಷ್ಟ್ರದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದ್ದಾಗಿರುವ ಕಾರಣ, ಇದಕ್ಕೆ ಒಂದು ವಿಷಯದ ಬಗ್ಗೆ ಅರ್ಧಂಬರ್ಧ ತಿಳಿದು ಈ ರೀತಿ ಹೇಳಿಕೆ ನೀಡುವುದು ಸಮಂಜಸವಲ್ಲ ಎಂದಿದೆ. ರಾಜಕೀಯ ಉದ್ದೇಶಗಳಿಗಾಗಿ ರಾಜತಾಂತ್ರಿಕ ಸಂಭಾಷಣೆಗಳನ್ನು ಬಳಸಿಕೊಳ್ಳಬಾರದು. ಕೆನಡಾ ಪ್ರಧಾನಿ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾತ್ಸವ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನೊಂದೆಡೆ ಕೆನಡಾ ಪ್ರಧಾನಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿತ್ತು ಭಾರತದ ಆಂತರಿಕ ವಿಚಾರಗಳಲ್ಲಿ ನೀವ್ಯಾಕೆ ಮೂಗು ತೂರಿಸುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ದೇಶದಲ್ಲಿಯೇ ಮಾಡುವುದು ಬೇಕಾದಷ್ಟಿದೆ. ಮೊದಲು ಅವುಗಳನ್ನು ಸರಿ ಮಾಡಿ, ಆಮೇಲೆ ಬೇರೆ ದೇಶದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಟೀಕೆ ಮಾಡಿ ಎಂದು ಕಮೆಂಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಬೇರೆ ದೇಶಗಳ ಬಗ್ಗೆ ಅಧಿಕಪ್ರಸಂಗತನದ ಮಾತು ಬೇಡ. ಅರ್ಧಂಬರ್ಧ ವಿಷಯ ತಿಳಿದು ಈ ರೀತಿ ಮಾತನಾಡುವುದು ಒಂದು ದೇಶದ ಪ್ರಧಾನಿಗೆ ಶೋಭೆ ತರುವುದಿಲ್ಲ ಎಂದು ಇನ್ನೊಂದಿಷ್ಟು ಮಂದಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತದಲ್ಲಿ ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ಕಳೆದ ಆರು ದಿನಗಳಿಂದ ದೆಹಲಿ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ರೈತರ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ ಮೊದಲ ಅಂತಾರಾಷ್ಟ್ರೀಯ ನಾಯಕ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಎಂದು ವರದಿ ವಿವರಿಸಿದೆ.