ಬೆಂಗಳೂರು: ವಿನೋದ್ ರಾಜ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದು, ಅದರಲ್ಲಿ ಅಶ್ಲೀಲ ಫೋಟೋಗಳನ್ನ ಹಾಕಲಾಗುತ್ತಿದೆ ಎಂಬುದು ತಿಳಿಯುತ್ತಿದ್ದಂತೆ ವಿನೋದ್ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಸಾಯಿಪ್ರಕಾಶ್ ಅವರು ಕರೆ ಮಾಡಿದಾಗ ನಂಗೆ ಈ ವಿಚಾರದ ಬಗ್ಗೆ ತಿಳಿಯಿತು. ನಂಗೆ ಈ ಫೇಸ್ ಬುಕ್ ಅದೆಲ್ಲಾ ಗೊತ್ತೆ ಇಲ್ಲ. ನನ್ನ ತಾಯಿ ಜೊತೆ ತೋಟ, ಆಸ್ಪತ್ರೆ, ಪ್ರಾಣಿಗಳ ಜೊತೆ ಆಟ ಈ ರೀತಿ ಬದುಕುತ್ತಿದ್ದೇನೆ.
ಈ ರೀತಿಯೆಲ್ಲಾ ಮಾಡಿ ಸಮಾಜದಲ್ಲಿ ಕಲಾವಿದರಿಗೆ ಮಾನಸಿಕವಾಗಿ ನೋವು ಕೊಡಬೇಡಿ. ಈಗಾಗಲೇ ಸಾಲು ಸಾಲು ಕಷ್ಟಗಳನ್ನ ಎದುರಿಸಿದ್ದೇವೆ. ಸದ್ಯ ಪರಿಸರದಲ್ಲಿದ್ದುಕೊಂಡು ಅದಕ್ಕೆ ಸಮಯ ಕೊಟ್ಟು ನೆಮ್ಮದಿಯಾಗಿ ಬದುಕುತ್ತಿದ್ದೇವೆ. ಇಂಥ ನಕಲಿ ಖಾತೆ ತೆರೆದು ನೋವುಂಟು ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ ಅಂತ ವಿನೋದ್ ರಾಜ್ ಹೇಳಿದ್ದಾರೆ.
ವಿನೋದ್ ರಾಜ್ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆ ತೆರೆದು, ಅದರಲ್ಲಿ ಅಶ್ಲೀಲ ಎನಿಸುವಂತ ಫೋಟೋಗಳನ್ನ ಶೇರ್ ಮಾಡುತ್ತಿದ್ದರಂತೆ. ಇದು ವಿನೋದ್ ರಾಜ್ ಅವರ ಗಮನಕ್ಕೆ ಬಂದಿದ್ದು, ಸೈಬರ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದ್ದಾರೆ.