ಉತ್ತರಪ್ರದೇಶ : ಇಲ್ಲಿನ ಪ್ರತಾಪಗಡ ಜಿಲ್ಲೆಯ ಪ್ರಯಾಗ್ ರಾಜ್- ಲಕ್ನೋ ಹೆದ್ದಾರಿ ಯಲ್ಲಿ ಟ್ರಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 6 ಮಕ್ಕಳು ಸೇರಿದಂತೆ 14 ಮಂದಿ ಮೃತಪಟ್ಟಿದ್ದಾರೆ.
ದೇಶರಾಜ್ ಇನಾರಾ ಗ್ರಾಮದ ಸಮೀಪ ಮಹೀಂದ್ರಾ ಬೊಲೆರೊ ವಾಹನ ಮತ್ತು ನಿಲ್ಲಿಸಿದ್ದ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೊಲೆರೋ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.
ಮದುವೆ ಸಮಾರಂಭವನ್ನು ಮುಗಿಸಿಕೊಂಡು ದುರ್ದೈವಿಗಳು ತಮ್ಮ ಮನೆಗಳಿಗೆ ವಾಪಾಸಾಗುತ್ತಿದ್ದರು. ಈ ವೇಳೆ ಪ್ರಯಾಗ್ ರಾಜ್- ಲಕ್ನೋ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಯರ್ ಪಂಚರ್ ಆದ ಕಾರಣಕ್ಕೆ ರಸ್ತೆ ಬದಿಯಲ್ಲಿ ಟ್ರಕ್ ಅನ್ನು ನಿಲ್ಲಿಸಲಾಗಿತ್ತು. ಇದೆ ವೇಳೆ ಅತೀ ವೇಗದಲ್ಲಿ ಬಂದ ಕಾರು ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಅರ್ಧದಷ್ಟು ಭಾಗ ಟ್ರಕ್ ಅಡಿಭಾಗದಲ್ಲಿ ಸಿಲುಕಿಕೊಂಡಿದೆ. ತದನಂತರ ಪೊಲೀಸರು ಮತ್ತು ಗ್ರಾಮಸ್ಥರ ಸಹಾಯದಿಂದ ಕಾರನ್ನು ಹೊರತೆಗೆಯಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪ್ರತಾಪಗಢ ಎಸ್ ಪಿ ಅನುರಾಗ್ ಆರ್ಯ , ನಿನ್ನೆ ರಾತ್ರಿ ಸುಮಾರು 11.45 ರ ಮಧ್ಯರಾತ್ರಿ ಘಟನೆ ನಡೆದಿದೆ. ಕಾರಿನಲ್ಲಿದ್ದ 6 ಮಕ್ಕಳು ಸೇರಿದಂತೆ 14 ಮಂದಿ ಮೃತರಾಗಿದ್ದಾರೆ . ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.