ನವದೆಹಲಿ: ದೇಶಾದ್ಯಂತ ಅನ್ನದಾತ ರೊಚ್ಚಿಗೆದ್ದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರೈತರೊಂದಿಗೆ ಸಭೆ ನಡೆಸಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ರೈತರೊಂದಿಗೆ ಐದನೇ ಸುತ್ತಿನ ಮಾತುಕತೆ ನಡೆಸಿತ್ತಾದ್ದರೂ ಯಾವುದೇ ನಿರ್ಣಯಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಗೃಹ ಸಚಿವರು ರೈತ ಮುಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ.
ಅಮಿತ್ ಷಾ ಅವರಿಂದ ಕರೆ ಬಂದಿದ್ದು, ಡಿಸೆಂಬರ್ 8ರ ಸಂಜೆ 7ಕ್ಕೆ ಸಭೆ ಸೇರಲು ಕೋರಲಾಗಿದೆ ಎಂದು ರೈತ ಮುಖಂಡ ರಾಕೇಶ್ ಟಿಕೈಟ್ ಅವರು ತಿಳಿಸಿದ್ದಾರೆ. ವಿವಿಧ ರೈತ ಸಂಘಟನೆಗಳ ಮುಖಂಡರು ಈ ಸಭೆಯಲ್ಲಿ ಭಾಗವಹಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನವೆಂಬರ್ 26ರಿಂದ ದೆಹಲಿ ಗಡಿ ಪ್ರದೇಶಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.ಇಂದು ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ಪ್ರತಿಪಕ್ಷಗಳಿಂದಲೂ ಬೆಂಬಲ ವ್ಯಕ್ತವಾಗಿದೆ.
ಕೇಂದ್ರ ಗೃಹ ಸಚಿವರ ಜೊತೆಗಿನ ಮಾತುಕತೆ ಮೂಲಕ ಏನಾದರು ಧನಾತ್ಮಕ ಅಂಶ ಹೊರಬೀಳಬಹುದು ಎಂದು ಆಶಾಭಾವದಲ್ಲಿ ರೈತರಿದ್ದು ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.